Thursday, July 3, 2008

ನನ್ನ ಪುಸ್ತಕಗಳ ಪರಿಚಯ- ಕೆಲವು ಡೌನ್‌ಲೋಡ್‌ಗೂ ಲಭ್ಯ


ನನ್ನ ಹೊಸ ಪುಸ್ತಕ
ಮನೆಯೇ ಇಲ್ಲದ ಬಾಗಿಲು- ಮುಲ್ಲಾ ನಸ್ರುದ್ದೀನ್ ಕತೆಗಳು

ಪ್ರಕಾಶಕರು: ಲಂಕೇಶ್ ಪ್ರಕಾಶನ
ನಂ.9, ಪೂರ್ವ ಆಂಜನೇಯ ಗುಡಿ ರಸ್ತೆ
ಬಸವನಗುಡಿ, ಬೆಂಗಳೂರು-560004
ದೂರವಾಣಿ: 080-26676427
lankeshprakashana@gmail.com

ನಿನಗೆ ವಿಶೇಷ ಜ್ಞಾನದರಿವು ಬೇಕಾದಲ್ಲಿ
ಯಾರದಾದರೂ ಮುಖ ನೋಡು:
ಆಳವಾಗಿ ನೋಡು,
ಆ ವ್ಯಕ್ತಿಯ ನಗುವಿನೊಳಗೆ,
ಜ್ಞಾನದ ಅಂತಿಮ ಸತ್ಯವಿದೆ...
    -ಜಲಾಲುದ್ದೀನ್ ರೂಮಿ

  ಮುಲ್ಲಾ ನಸ್ರುದ್ದೀನ್ ಅಥವಾ ನಸ್ರುದ್ದೀನ್ ಖೋಜಾ ಅಥವಾ ಬರೇ ನಸ್ರುದ್ದೀನ್ ಎನ್ನುವ ವ್ಯಕ್ತಿ ಜಗತ್ತಿನಾದ್ಯಂತ ಹಲವಾರು ಸಂಸ್ಕೃತಿಗಳಲ್ಲಿ ವಿಶಿಷ್ಟ ಮನರಂಜನೆಯ ಕತೆಗಳಲ್ಲಿ ರಂಜಿಸಿದ್ದಾನೆ. ಆ ಕತೆಗಳ ಉದ್ದೇಶ ಬರೇ ಮನರಂಜನೆಯಷ್ಟೇ ಆಗಿಲ್ಲ. ಸೂಫಿ ದಾರ್ಶನಿಕರ ಬೋಧನಾ ಕತೆಗಳಲ್ಲಿಯಂತೆ ಅವುಗಳ ಒಳಾರ್ಥವೇ ಬೇರೆಯಾಗಿರುತ್ತದೆ. ಸೂಫಿಗಳಿಗೆ ಆ ವ್ಯಕ್ತಿ ಮುಖ್ಯವಲ್ಲ ಆದರೆ ಆತನ ಸಂದೇಶ ಮುಖ್ಯವಾದುದು. ನಸ್ರುದ್ದೀನ್ ಯಾರು, ಆತ ಎಲ್ಲಿ ಜೀವಿಸಿದ್ದ ಅಥವಾ ಯಾವಾಗ ಜೀವಿಸಿದ್ದ ಎನ್ನುವುದು ಯಾರಿಗೂ ಸರಿಯಾಗಿ ತಿಳಿದಿಲ್ಲ ಅಥವಾ ಆತನದು ಬರೇ ಒಂದು ಕಾಲ್ಪನಿಕ ಪಾತ್ರವೇ ಎಂಬುದೂ ಸಹ ತಿಳಿದಿಲ್ಲ. ಏನೇ ಆದರೂ ಆತನದು ದೇಶ ಕಾಲಗಳನ್ನು ಮೀರಿದ ವ್ಯಕ್ತಿತ್ವ. ಆದರೂ ಜನ ಆ ವ್ಯಕ್ತಿಗೆ ಚರಿತ್ರೆಯ ಒಂದು ಹಂದರ ಒದಗಿಸಿದ್ದಾರೆ ಹಾಗೂ ಅದೇ ರೀತಿ ಒಂದು ಸಮಾಧಿಯನ್ನೂ ಸಹ ನೀಡಿದ್ದಾರೆ. ತನ್ನ ಹಲವಾರು ಕತೆಗಳಲ್ಲಿ ನಸ್ರುದ್ದೀನ್ ದಡ್ಡನಂತೆ ಕಂಡುಬರುತ್ತಾನೆ. ಆದರೆ ನಸ್ರುದ್ದೀನ್ ಒಬ್ಬ ಸೂಫಿ ಅನುಭಾವಿ, ತತ್ವಜ್ಞಾನಿ, ವಿವೇಕಿ ಮತ್ತು ಅತಿಯಾದ ಹಾಸ್ಯಪ್ರಜ್ಞೆಯುಳ್ಳ ವ್ಯಕ್ತಿಯಾಗಿದ್ದ. ಹಲವಾರು ಸೂಫಿಗಳು ತಮ್ಮ ಅನುಭಾವದ ‘ಹುಚ್ಚುತನ’ವನ್ನು ಮುಠ್ಠಾಳತನದ ಸೋಗಿನಲ್ಲಿ ವ್ಯಕ್ತಪಡಿಸುತ್ತಾರೆ. ನಸ್ರುದ್ದೀನನೇ ಹೇಳಿಕೊಂಡಿರುವಂತೆ ಆತನೆಂದೂ ಸತ್ಯವನ್ನು ನುಡಿದೇ ಇಲ್ಲ. ಆತನ ಕತೆಗಳು ಟರ್ಕಿಯ ಗುಡ್ಡಗಾಡು ಜನರಿಂದ ಹಿಡಿದು ಆಗಿನ ಪರ್ಷಿಯಾ, ಅರೇಬಿಯಾ, ಆಫ್ರಿಕಾ, ರಷ್ಯಾ ಹಾಗೂ ‘ಸಿಲ್ಕ್ ರೂಟ್’ನ ಮೂಲಕ ಚೀನಾ ಹಾಗೂ ಭಾರತಕ್ಕೆ ಆನಂತರ ಯೂರೋಪಿಗೂ ಹರಡಿವೆ. ಸುಮಾರು ಎಂಟು ನೂರು ವರ್ಷಗಳಿಂದ ಚಾಲ್ತಿಯಲ್ಲಿರುವ ಆತನ ಕತೆಗಳು ಎಲ್ಲವೂ ಆತನವೇ ಅಲ್ಲ. ಅಲ್ಬೇನಿಯಾ, ಅರೇಬಿಕ್, ಅರ್ಮೇನಿಯ, ಬರ್ಬರ್, ಬೋಸ್ನಿಯಾ, ಬಲ್ಗೇರಿಯಾ, ಚೀನಿ, ದಾಗೇಸ್ತಾನಿ, ಗ್ರೀಕ್, ಜುಡಿಯೋ-ಅರೇಬಿಕ್, ಕುರ್ದಿಶ್, ಮಾಲ್ಟೀಸ್, ಮಾಂಡಾಯಿಕ್, ಮ್ಯಾಸಿಡೋನಿಯಾ, ಪರ್ಷಿಯಾ, ಸರ್ಬಿಯಾ, ಸಿಸಿಲಿ, ಸಿರಿಯಾ, ತಾಜಿಕಿಸ್ತಾನ್, ಟರ್ಕಿ, ಐಗುರ್ ಮತ್ತು ಉಜ್ಬೇಕಿಸ್ತಾನ್ ಸಂಸ್ಕೃತಿ ಮತ್ತು ಜನಪದದಲ್ಲಿ ನಸ್ರುದ್ದೀನ್‌ನ ಕತೆಗಳಿವೆ.

ನನ್ನ ಇತರ ಪುಸ್ತಕಗಳು
ಪ್ರಕಾಶಕರು: ಅಸೀಮ ಅಕ್ಷರ, 36, 3ನೇ ಕ್ರಾಸ್, ಅಮೃತನಗರ, ಸಹಕಾರನಗರ ಅಂಚೆ, ಬೆಂಗಳೂರು-560092
aseemaakshara@gmail.com

ನೀನೆಂಬ ನಾನು (ಮರುಮುದ್ರಣ)


ಸೂಫಿಸಂ ಎನ್ನುವುದು ಪ್ರೇಮದ ಅನುಭಾವದ ಹಾದಿ. ಆ ಹಾದಿಯ ಪಯಣ ಬೇರೆ ಎಲ್ಲಿಗೂ ಅಲ್ಲ, ಬದಲಿಗೆ ತನ್ನದೇ ಆತ್ಮದೆಡೆಗೆ. ಆ ಹಾದಿಯಲ್ಲಿ ಹೊರಟವನು ತನ್ನ ಹೃದಯಲ್ಲೇ ಸತ್ಯ ಅಥವಾ ದೇವರನ್ನು ಕಂಡುಕೊಳ್ಳುತ್ತಾನೆ. ಆ ಸತ್ಯ ಅಥವಾ ದೇವರು ಬೇರೆ ಯಾರೂ ಅಲ್ಲ, ಅದು ‘ನೀನೇ ಎಂಬ ನಾನು.’ ‘ನಿನ್ನ ಹೊರಗಿನದ್ಯಾವುದನ್ನೂ ನೀನು ಅರಿಯಲಾರೆ, ಏಕೆಂದರೆ ಯಾವುದನ್ನಾದರೂ ಸಂಪರ್ಣ ಅರಿಯಬೇಕಾದಲ್ಲಿ, ಅರಿಯಬೇಕಾದ ವಸ್ತು ನೀನೇ ಆಗಿರಬೇಕು. ಹಾಗಾಗಿ ನಿನ್ನ ಹಲವಾರು ಪ್ರಶ್ನೆಗಳಿಗೆ ಉತ್ತರಗಳನ್ನು ನಿನ್ನೊಳಗಿನ ಅಸೀಮ ವಾಸ್ತವದಲ್ಲೇ ಅರಸಬೇಕು’ ಎಂಬುದು ಸೂಫಿಸಂನ ಮೂಲಭೂತ ತತ್ವ. ಸೂಫಿಗಳ ಪ್ರಕಾರ ಸತ್ಯವನ್ನು ಕಂಡುಕೊಳ್ಳಲು ಎಷ್ಟು ಮನುಷ್ಯರಿದ್ದಾರೋ ಅಷ್ಟು ಹಾದಿಗಳಿವೆ.
ಗೆಳೆಯ ಶ್ರೀಯುತ ಜೆ. ಬಾಲಕೃಷ್ಣ ಅವರು ಕನ್ನಡ ಓದುಗರಿಗೆ ತಮ್ಮ ‘ನೀನೆಂಬ ನಾನು’ ಕೃತಿಯ ಮೂಲಕವಾಗಿ ಒಂದು ಮಹತ್ ಪರಂಪರೆಯನ್ನೇ ಪರಿಚಯಿಸುವ ಉತ್ತಮವಾದ ಕಾರ್ಯ ಮಾಡಿದ್ದಾರೆ. ಕರ್ನಾಟಕದ ಚರಿತ್ರೆಗೆ ಮತ್ತು ಸಾಂಸ್ಕೃತಿಕ ಪರಂಪರೆಗೆ ಸೂಫಿ ಪರಂಪರೆ ಹೊಸತಲ್ಲವಾದರೂ ಕನ್ನಡದ ಓದುಗರಿಗೆ ಇವತ್ತಿಗೂ ಇಂಥ ಅಮೂಲ್ಯ ಖನಿ ಅಲಭ್ಯವೇ ಆಗಿ ಉಳಿದುಬಿಟ್ಟಿತು. ಹೆಸರಿಸಬಹುದಾದ ಒಂದೆರಡು ಕನ್ನಡ ಕೃತಿಗಳನ್ನು ಬಿಟ್ಟರೆ ಸೂಫಿ ಪರಂಪರೆಗೆ ಸಂಬಂಧಿಸಿದ ಹೆಚ್ಚು ಕೃತಿಗಳು ಕನ್ನಡದಲ್ಲಿ ಬಂದೇ ಇಲ್ಲ. ಕಥಾ ಸಾಹಿತ್ಯವಂತೂ ಅಲ್ಲಿ ಇಲ್ಲಿ ಉಲ್ಲೇಖಿತ ವಾಗಿರುವ ಮತ್ತು ಬಿಡಿ ಬಿಡಿಯಾಗಿ ಪ್ರಕಟವಾಗಿರುವ ಕೆಲವನ್ನ ಬಿಟ್ಟರೆ ಇಡಿಯಾಗಿ ಕನ್ನಡದಲ್ಲಿ ಬಂದಿರಲಿಲ್ಲ. ಈ ಕೆಲಸವನ್ನ ಗೆಳೆಯ ಬಾಲಕೃಷ್ಣ ಅವರು ತುಂಬಾ ಶ್ರದ್ಧೆಯಿಂದ ಮತ್ತು ಪ್ರೀತಿಯಿಂದ ಮಾಡಿದ್ದಾರೆ. ಕತೆಗಳನ್ನ ಅನುವಾದಿಸುವುದರ ಜೊತೆಗೆ ಸೂಫಿ ಪರಂಪರೆ ಮತ್ತು ವಿಚಾರಗಳ ಬಗ್ಗೆ ಅತ್ಯಂತ ವಿವರವಾದ ಮತ್ತು ಆಳವಾದ ಅಧ್ಯಯನ ನಡೆಸಿ ಅದರ ಫಲಿತವಾಗಿ ಉತ್ತಮವಾದ ಹಾಗೂ ಉಪಯುಕ್ತವಾದ ದೀರ್ಘಲೇಖನವನ್ನು ಕತೆಗಳಿಗೆ ಪೂರ್ವ ಪೀಠಿಕೆಯಾಗಿ ನೀಡಿದ್ದಾರೆ. ಇವರ ಈ ಲೇಖನ ಓದುಗನಿಗೆ ಉಪಯುಕ್ತವಾಗುವುದರಲ್ಲಿ  ಸಂಶಯವಿಲ್ಲ (ಮುನ್ನುಡಿಯಿಂದ).ಪುಟ್ಟ ರಾಜಕುಮಾರ (ಮಕ್ಕಳ ನಾಟಕ)
ಅನುವಾದ ಮತ್ತು ನಾಟಕ ರೂಪಾಂತರಆಂತ್ವಾನ್ ದ ಸೇಂತ್-ಎಕ್ಸೂಪರಿ (೨೯.೬.೧೯೦೦ - ೩೧.೭.೧೯೪೪) ಉತ್ತಮ ಬರಹಗಾರನಾಗಿರುವಂತೆ ಅತ್ಯುತ್ತಮ ಪೈಲಟ್ ಸಹ ಆಗಿದ್ದನು. ಫ್ರಾನ್ಸ್‌ನವನಾದ ಈತ ಸಾಹಸ ಮತ್ತು ಅಪಾಂiವನ್ನು ಕವಿದೃಷ್ಟಿಯಲ್ಲಿ ಕಂಡವನು. ಆದರೆ ಆತ ಪೈಲಟ್ ಆಗಬೇಕೆಂದುಕೊಂಡಿದ್ದವನಲ್ಲ. ಮೊದಲ ವಿಶ್ವಯುದ್ಧದ ಸಮಯದಲ್ಲಿ ಯುವಕನಾಗಿದ್ದ ಈತನನ್ನು ಮಿಲಿಟರಿಗೆ ಸೇರುವಂತೆ ಆದೇಶಿಸಿ ಅಲ್ಲಿ ವಾಯುಪಡೆಗೆ ಸೇವೆ ಸಲ್ಲಿಸುವಂತೆ ಹೇಳಲಾಯಿತು. ಅಲ್ಲಿ ವಿಮಾನ ಮತ್ತು ಮಾನಚಾಲನೆಯಲ್ಲಿ ಮೂಡಿದ ಆಸಕ್ತಿ ಅದನ್ನೇ ಆತನ ಬದುಕಾಗುವಂತೆ ಮಾಡಿತು. ಮರಳುಗಾಡಿನಲ್ಲಿನ ಈ ರೀತಿಯ ಮತ್ತೊಂದು ಅನುಭವವೇ ‘ಪುಟ್ಟ ರಾಜಕುಮಾರ’ ಬರೆಯಲು ಪ್ರೇರೇಪಿಸಿತು. ವಿಶಿಷ್ಟ ಕಥಾವಸ್ತು ಹೊಂದಿರುವ ಈ ‘ಪುಟ್ಟ ರಾಜಕುಮಾರ’ ಒಂದು ಪ್ರಖ್ಯಾತ ಪುಸ್ತಕ. ಫ್ರೆಂಚ್ ಭಾಷೆಯಲ್ಲಿ (‘ಲ ಪತಿ ಪ್ರಿನ್ಸ್’) ೧೯೪೩ರಲ್ಲಿ ಮೊದಲು ಪ್ರಕಟವಾದ ಈ ಪುಸ್ತಕ ಈಗಾಗಲೇ ವಿಶ್ವದ ೧೨೫ಕ್ಕೂ ಹೆಚ್ಚು ಭಾಷೆಗಳಿಗೆ ಅನುವಾದಗೊಂಡಿದೆ. ಈಗಲೂ ಪ್ರತಿ ವರ್ಷ ೧೦ ಲಕ್ಷಕ್ಕೂ ಹೆಚ್ಚು ಪ್ರತಿಗಳು ಮಾರಾಟವಾಗುತ್ತಿವೆ. 
ಆದರೆ ಈ ಪುಸ್ತಕ ನಿಜವಾಗಿಯೂ ಮಕ್ಕಳ ಪುಸ್ತಕವೆ? ಅಥವಾ ದೊಡ್ಡವರಿಗಾಗಿ ಬರೆದ ಮಕ್ಕಳ ಕತೆಯೆ? ಸೇಂತ್ ಎಕ್ಸೂಪರಿಯೇ ಹೇಳಿದಂತೆ, ‘ಎಲ್ಲಾ ದೊಡ್ಡವರು ಮೊದಲು ಮಕ್ಕಳಾಗಿದ್ದವರೆ. ಆದರೆ, ಅದನ್ನು ನೆನೆಪಿನಲ್ಲಿಟ್ಟುಕೊಳ್ಳುವವರು ಕೆಲವರು ಮಾತ್ರ’. ಸುಖಸಂತೋಷದ ಬದುಕಿನ ಅವಶ್ಯಕತೆಗಳು ತೀರಾ ಸರಳವಾದುವು ಹಾಗೂ ನಿಸ್ವಾರ್ಥತೆಯೇ ಸಿರಿಸಂಪತ್ತು ಎಂಬ ಸಂದೇಶವನ್ನು ‘ಪುಟ್ಟ ರಾಜಕುಮಾರ’ ಸಾರುತ್ತಾನೆ.


ಆಯ್ದ ಭಾಗಗಳಿಗೆ `ಚುಕ್ಕು-ಬುಕ್ಕು' ಓದಿನ ಬಂಡಿಗೆ ಭೇಟಿ ಕೊಡಿ:  
http://chukkubukku.com/nama-nmmolagobba

j.balakrishna@gmail.com
*******
ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ `ಶ್ರೇಷ್ಠ ಲೇಖಕರು' ಪ್ರಶಸ್ತಿ ಪ್ರದಾನ
******************


ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ `ಶ್ರೇಷ್ಠ ಲೇಖಕರು' ಪ್ರಶಸ್ತಿ2011-12ರ ವಿಜ್ಞಾನ, ತಂತ್ರಜ್ಞಾನ ಮತ್ತು ಕೃಷಿ ಕ್ಷೇತ್ರದಲ್ಲಿ ಕನ್ನಡದಲ್ಲಿ ಪುಸ್ತಕವನ್ನು ಬರೆದು ಪ್ರಕಟಿಸಿರುವ ಲೇಖಕರಿಗೆ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ವತಿಯಿಂದ (http://www.kstacademy.org) ನೀಡಲಾಗುವ ಪುರಸ್ಕಾರಕ್ಕೆ ನನ್ನ `ಮಳೆಬಿಲ್ಲ ನೆರಳು' ಕೃತಿಗೆ ವಿಜ್ಞಾನ ವಿಷಯದ ವಿಭಾಗದಲ್ಲಿ `ಶ್ರೇಷ್ಠ ಲೇಖಕರು' ಪ್ರಶಸ್ತಿಗೆ ಆಯ್ಕೆಯಾಗಿದೆಯೆಂದು ತಿಳಿಸಲು ಹರ್ಷಿಸುತ್ತೇನೆ. ನಿಮ್ಮ ಪ್ರೋತ್ಸಾಹ, ಬೆಂಬಲ ಸದಾ ಹೀಗೇ ಇರಲಿ.
ಆ ಕೃತಿಯಲ್ಲಿನ ಕೆಲವು ಲೇಖನಗಳು ನನ್ನ ಬ್ಲಾಗ್ ನಲ್ಲಿ ಪ್ರಕಟವಾಗಿವೆ. ಸಮಯ ಸಿಕ್ಕಾಗ ಓದಿ ಅಭಿಪ್ರಾಯ ತಿಳಿಸಿ.
ಸೀಲಾಕ್ಯಾಂತ್ ಕಾಲವೇ ಮರೆತಿದ್ದ ಮೀನು: http://antaragange.blogspot.in/2011/05/blog-post_21.html
ಡಾಲ್ಫಿನ್: ಮಾನವನ ಬೌದ್ಧಿಕ ಸಮಜೀವಿ: http://antaragange.blogspot.in/2010/12/blog-post.html
ಹೆನ್ರಿಟಾ ಲ್ಯಾಕ್ಸ್ ಎಂಬ ಕಪ್ಪು ಮಹಿಳೆಯ ಅಮರಕತೆ: http://antaragange.blogspot.in/2010/11/blog-post.html
ಅನ್ಯಗ್ರಹ ಜೀವಿಗಳಿವೆಯೆ?: http://antaragange.blogspot.in/2010/10/blog-post.html
`ಕಾಮ'ನಬಿಲ್ಲಿನ ಅನಾವರಣ: http://antaragange.blogspot.in/2010/05/blog-post.html
ನಿಗೂಢ ನಿಯಾಂಡರ್ತಲ್ ಮಾನವ: http://antaragange.blogspot.in/2010/01/blog-post.html

*******************************************

2ನೇ ಜೂನ್ 2011ರ `ಅಗ್ನಿ' ವಾರಪತ್ರಿಕೆಯಲ್ಲಿ ಮಂಜುನಾಥ್ ಅದ್ದೆಯವರ ಅಂಕಣ `ಗಾಳಿ ಗಮಲು'ವಿನಲ್ಲಿ ಪ್ರಕಟವಾಗಿರುವ ನನ್ನ ಪುಸ್ತಕ `ಮಳೆಬಿಲ್ಲ ನೆರಳು'ವಿನ ಪರಿಚಯ:


ಗ್ರಹಿಕೆ ವಿಸ್ತರಿಸುವ ಎರಡು ಪುಸ್ತಕಗಳು
ಭಾರತದ ಮಟ್ಟಿಗೆ ದುಡಿಯುವ ಜನರ ಸಾಮುದಾಯಿಕ ಅನುಭವಗಳ ಹೊರತು ಉಳಿದದ್ದೆಲ್ಲಾ ನಡೆದದ್ದು ಮುಚ್ಚುಮರೆಯಲ್ಲಿಯೆ. ಅದರಲ್ಲೂ ಅಕ್ಷರ ಮತ್ತು ವಿಚಾರಗಳ ಲೋಕದ ವಂಚನೆಯಂತೂ ಸಾಮಾಜಿಕವಾಗಿ ನಿಷಿದ್ಧದ ಸಂಗತಿಯಂತೆ ಆಚರಣೆಯಲ್ಲಿದ್ದದ್ದು ಲೋಕಾಂತ ಸತ್ಯ. ದುಡಿಯುವ ಜನರ ಸಮುದಾಯಗಳಿಂದ ಬಹಳಷ್ಟು ಜನ ಅಕ್ಷರದ ಲೋಕಕ್ಕೆ ಇಂದು ಪ್ರವೇಶ ಪದೆದಿದ್ದರೂ ಸಂಗತಿ, ವಿಚಾರ, ಸತ್ಯಗಳ ಮುಚ್ಚುಮರೆಯಂತೂ ನಡೆದೇ ಇದೆ.
ಅದರಲ್ಲೂ ವಿಜ್ಞಾನ, ತಂತ್ರಜ್ಞಾನ, ಅಧ್ಯಾತ್ಮದ ವಿಚಾರಗಳಂತೂ ವಂಚನೆಯ ಪರಮಾವಧಿ ತಲುಪಿ ಭಾರತದಲ್ಲಿ ವ್ಯಾಖ್ಯಾನಗೊಂಡಂತೆ, ತಪ್ಪುತಪ್ಪಾಗಿ ತಲುಪಿದಂತೆ, ತುರ್ಜುಮೆಗೊಂಡಂತೆ ವಿಶ್ವದಲ್ಲಿ ಬೇರೆಲ್ಲೂ ನಡೆದಿರಲಿಕ್ಕೆ ಸಾಧ್ಯವೇ ಇಲ್ಲ. ಇದಕ್ಕೆ ಕಾರಣ ಅಕ್ಷರ ಲೋಕದ ಗುತ್ತಿಗೆಯನ್ನು ಶತಶತಮಾನಗಳಿಂದ ಹಿಡಿದಿದ್ದವರ ಆತ್ಮವಂಚಕ ಮನಸ್ಥಿತಿ. ಜಾಗತಿಕ ಮಟ್ಟದಲ್ಲಿ ಜ್ಞಾನದ ನವ ಶಾಖೆಗಳು ತಲೆ ಎತ್ತಿದಾಗ ಅವುಗಳನ್ನು ಹಿಡಿದು, ಪಡೆದು ತರುವ ಚಾಂಪಿಯನ್‌ಗಳಾಗಿ ಇವರು ಆವರಿಸಿಕೊಂಡದ್ದು ಕೂಡ ತಮ್ಮ ಪಾರಂಪರಿಕ ಆತ್ಮವಂಚನೆಯ ಜೊತೆಯಲ್ಲಿಯೆ.
ಈ ಕಾರಣದಿಂದ ವಿಜ್ಞಾನ, ತಂತ್ರಜ್ಞಾನ, ಹೊಸ ಕೃಷಿ ಮಾದರಿಯಂತಹ ವಿಚಾರಗಳು ಸ್ಥಳೀಯ ಜನರ ಪಾಲಿಗೆ ಬೆಸಗೊಂಡ ರೀತಿಯೇ ತೀರಾ ಅಧ್ವಾನದಿಂದ ಕೂಡಿದೆ. ನಮಗಷ್ಟೇ ಅಲ್ಲ; ಎಲ್ಲಾ ಸ್ಥಳೀಯ ಭಾಷೆಗಳಿಗೆ ಜ್ಞಾನದ ಹೊಸ ಶಾಖೆಗಳು ತಲುಪಿದ್ದು ಇದೇ ಬಗೆಯಲ್ಲಿ. ಬೇರೆ ಬೇರೆ ಕಾರಣಗಳಿಗಾಗಿ ಬಂಗಾಳಿ, ಮಲೆಯಾಳಂ, ತಮಿಳು ಭಾಷೆಗಳ ಮಟ್ಟಗೆ ಈ ವಂಚನೆ ಪೂರ್ಣವಲ್ಲದಿದ್ದರೂ ಸ್ವಲ್ಪ ಮಟ್ಟಿನ ಹೊಡೆತ ತಿಂದಿದೆ. ಈ ಮೂರೂ ಭಾಷೆಗಳ ನೆಲದಲ್ಲಿ ಒಂದೂವರೆ ಶತಮಾನಕ್ಕೂ ಮೊದಲೇ ನಡೆದ ದೊಡ್ಡ ಮಟ್ಟದ ಸಾಂಸ್ಕೃತಿಕ ತಾಕಲಾಟಗಳ ಪರಿಣಾಮ ಇದು.
ಈ ದೇಶದ ಚರಿತ್ರೆಯಲ್ಲಿ ವಿಚಾರ ಮತ್ತು ವಿಜ್ಞಾನದ ಕದನ ಬೃಹತ್ ಅಧ್ಯಾಯವೇ ಆಗಿದೆ. ವಲಸೆ ವೈದಿಕರು-ಮೂಲನಿವಾಸಿ ಶೈವರ ನಡುವೆ ನಡೆದ ಸುದೀರ್ಘ ಸಂಘರ್ಷವು ಇದೇ ಆಗಿದೆ. ಇದಾದ ನಂತರ ವೈದಿಕರು ತಮ್ಮ ವಂಚಕ ಯುದ್ಧವನ್ನು ಮುಂದುವರೆಸಿದ್ದು ಇಲ್ಲಿಯ ಬೌದ್ಧರ ಮೇಲೆ. ಇವೆರಡೂ ವಿಚಾರಧಾರೆಗಳ ವಿರುದ್ಧದ ವೈದಿಕರ ಗೆಲುವು ವಿಜ್ಞಾನ, ದೇವರು, ವಿಚಾರ ಎಲ್ಲವನ್ನೂ ತಿರುಚಿ ಹಾಕಿತ್ತು. ಇದೇ ತಿರುಚುವ ಪರಂಪರೆಯೇ ಆಧುನಿಕ ವಿಜ್ಞಾನವನ್ನೂ ನಮಗೆ ತಲುಪಿಸುವ ಕೆಲಸವನ್ನು ಮೊದಲಿಗೆ ಶುರುವಿಟ್ಟದ್ದು. ಈ ವಂಚನೆಯನ್ನು ಮೀರಿ ಇತ್ತೀಚೆಗೆ ವಿಚಾರ, ವಿಜ್ಞಾನ, ಅಧ್ಯಾತ್ಮವನ್ನು ಅವುಗಳ ನಿಜವಾದ ನೆಲೆಯಲ್ಲಿ ನೋಡುವ, ಗ್ರಹಿಸುವ, ವ್ಯಾಖ್ಯಾನಿಸುವ ಕೆಲಸವನ್ನು ವೈದಿಕೇತರರು ಆರಂಭಿಸಿದ್ದಾರಾದರೂ ಸಂಘರ್ಷ ಮಾತ್ರ ನಡೆದೇ ಇದೆ. ವಿಚಾರ, ವಿಜ್ಞಾನವನ್ನು ತಿರುಚಿ ಹೇಳುವ ಪರಿಪಾಠವೂ ಮುಂದುವರೆದಿದೆ. ವಾಸ್ತವ ಹೇಳಬೇಕೆನ್ನುವವರ ಪ್ರಯತ್ನಗಳೂ ನಡೆದಿವೆ.
ಈ ನಿಟ್ಟಿನಲ್ಲಿ ಇತ್ತೀಚೆಗೆ ಬಿಡುಗಡೆಯಾದ ಎರಡು ಕನ್ನಡದ ಪುಸ್ತಕಗಳು ಮಹತ್ವದವು ಆಗಿವೆ. ಅವುಗಳಲ್ಲಿ ಒಂದು ಡಾ.ಜೆ.ಬಾಲಕೃಷ್ಣರ ‘ಮಳೆಬಿಲ್ಲ ನೆರಳು ಎಂಬ ವಿಜ್ಞಾನದ ಲೇಖನಗಳ ಕೃತಿ, ಮತ್ತೊಂದು ಕೃಷ್ಣಮೂರ್ತಿ ಬಿಳಿಗೆರೆಯವರ ಕೃಷಿ ಚರಿತ್ರೆಯ ಪರಿಶೋಧದ ‘ಬೇಸಾಯವ ಮಾಡಿ ಪುಸ್ತಕ. ಒಳ ತಿರುಳಿನಲ್ಲಿ ಎರಡೂ ಭಿನ್ನವಾದ ಪುಸ್ತಕಗಳಾದರೂ ಗ್ರಹಿಕೆಯ ಗೇಯತೆಯಲ್ಲಿ ಪರಸ್ಪರ ಸಾಮ್ಯತೆ ಇರುವ ಕೃತಿಗಳು.
‘ಮಳೆಬಿಲ್ಲ ನೆರಳು ಕೃತಿಯ ಲೇಖನಗಳು ಕೇವಲ ವಿಜ್ಞಾನ ಬರಹಗಳು ಮಾತ್ರವಲ್ಲ; ಮನುಷ್ಯರ ಸಮಾಜ, ಸಂಸ್ಕೃತಿಗೆ ಸಂಬಂಧಿಸಿದ ಚಿಂತನೆಗಳೂ ಹೌದು. ಹಾಗೆಯೆ ಒಟ್ಟಾರೆ ಜೀವಿಗಳ ಜೀವಿತ ಕ್ರಮದ ಬಗೆಗಿನ ಅರಿವಿನ ವಿಸ್ತರಣೆಗೆ ಪೂರಕವಾದವುಗಳೂ ಹೌದು. ನಿಸರ್ಗ ಚೈತನ್ಯದ ಜೈವಿಕತೆಯಿಂದ ಮೊದಲ್ಗೊಂಡು ಕಾರ್ಪೊರೇಟ್ ವಲಯದ ಸಂಚಿನ ತನಕ ಬಾಲಕೃಷ್ಣ ವಿಶ್ವಮಟ್ಟದ ನಿದರ್ಶನಗಳ ಸಮೇತ ವಿವರಿಸುತ್ತಾರೆ.
ಪುಸ್ತಕದ ಉದ್ದಕ್ಕೆ ಜಗತ್ತಿನ ಜೀವಜಾಲದ ನಿಗೂಢ ಬೆಡಗುಗಳನ್ನ, ಬಣ್ಣಗಳನ್ನ ಹುಡುಕುವ ಬಗೆಯೇ ಓದುಗರ ಎದುರು ಬೇರೊಂದು ಲೋಕವನ್ನು ತೆರೆದು ಅನುಭವವನ್ನು ಹೆಚ್ಚಿಸುತ್ತದೆ. ನಿಯಾಂಡರ್ತಲ್ ಮಾನವನಿಂದ ಮೊದಲ್ಗೊಂಡು ಕನಸುಗಳ ತನಕ ವೈಜ್ಞಾನಿಕ ಮಾದರಿಗಳ ಹುಡುಕಾಟದ ವಸ್ತುಗಳು ಈ ಪುಸ್ತಕದಲ್ಲಿ ಇವೆ. ‘ಕಾಮನಬಿಲ್ಲಿನ ಅನಾವರಣ ಎಂಬ ಈ ಪುಸ್ತಕದ ಲೇಖನವನ್ನಂತೂ ಈ ನಾಡಿನ ಪ್ರತಿಯೊಬ್ಬ ಯುವಕ-ಯುವತಿಯೂ ಓದಿದರೆ ಸಿಗುವ ಲಾಭ ಹೆಚ್ಚು. ‘ಪ್ರೇಮಿಗಳ ಹಾಗೂ ಹುಚ್ಚರ ಮನಸ್ಥಿತಿ ಒಂದೇ ಆಗಿರುತ್ತದೆ. ವಿವೇಚನೆಯನ್ನೂ ಮೀರಿದ ಎಂಥ ಅದ್ಭುತ ಕಲ್ಪನೆಗಳು ಅವರವು! ಹುಚ್ಚ, ಪ್ರೇಮಿ ಹಾಗೂ ಕವಿ ಒಂದೇ ಕಲ್ಪನೆಯ ದೋಣಿಯ ಪಯಣಿಗರು ಎಂದು ಶೇಕ್ಷ್‌ಪಿಯರ್ ಹೇಳಿದ್ದು ಎಲ್ಲರಿಗೂ ತಿಳಿದಿರುವ ಸಂಗತಿ.
ಕಬಿ ಶೇಕ್ಸ್‌ಪಿಯರ್‌ನ ಈ ಗ್ರಹಿಕೆಗೆ ಪೂರಕವಾದ ದೇಹದ ರಾಸಾಯನಿಕಗಳಲ್ಲಿನ ಬೆಳವಣಿಗೆ ಯಾವುದು ಎಂಬುದನ್ನು ‘ಕಾಮನಬಿಲ್ಲಿನ ಅನಾವರಣ ವೈಜ್ಞಾನಿಕವಾಗಿ ಮುಂದಿಡುತ್ತದೆ. ಕಾಮ, ಪ್ರೇಮದ ವಿಚಾರಗಳಲ್ಲಿ ಕನಿಷ್ಠ ಅಗತ್ಯದ ವಿಚಾರಗಳನ್ನು ಯುವ ಜನತೆ ಮುಕ್ತವಾಗಿ ಚರ್ಚಿಸಲಾಗದಷ್ಟು ಮುಚ್ಚಿದ ಸಮಾಜ ನಮ್ಮದು. ಮಾನವ ಜೀವಿಯ ವರ್ತನೆಗಳ ಮೇಲೆ ದೇವರು, ಅರಿಷಡ್ವರ್ಗ, ಹಣೆಯಬರಹ, ವಿಧಿವಿಲಾಸದ ಸಂಗತಿಗಳನ್ನಷ್ಟೇ ಹೇರಿ ಕುಳಿತಿರುವ, ಈ ಅಲೌಕಿಕ ಸಂಗತಿಗಳ ಕಾವಲು ಕಾಯುತ್ತಿರುವ ಧಾರ್ಮಿಕ, ಸಾಮಾಜಿಕ ಸಂಗತಿ ಬಾಲ್ಯದಿಂದ ಯೌನಕ್ಕೆ ಕಾಲಿಡುವ ಅಸಂಖ್ಯಾತ ಯುವಕ-ಯುವತಿಯರ ವ್ಯಕ್ತಿತ್ವದ ಸಹಜ, ಸಮ್ಮತ ವಿಕಾಸಕ್ಕೆ ಕೊಡಲಿ ಪೆಟ್ಟನ್ನೇ ಹಾಕಿದೆ. ಮಾನವ ಜೀವಿಯ ಪ್ರೇಮ-ಕಾಮದ ವಿಚಾರದಲ್ಲಿ ಏನೆಲ್ಲಾ ಕೆಲಸ ಮಾಡುತ್ತವೆ ಎಂಬುದನ್ನು ವಿಶ್ವಮಟ್ಟದ ವೈಜ್ಞಾನಿಕ ಸಂಶೋಧನೆಗಳನ್ನು ಆಧರಿಸಿ ಜೆ.ಬಾಲಕೃಷ್ಣ ತೀರಾ ಉಪಯುಕ್ತ ಬರವಣಿಗೆಯನ್ನು ಬರೆದಿದ್ದಾರೆ.
‘ಈಗ ಜಲ ಮಾಯಾಂಗನೆಯರಿಗೆ ತಮ್ಮ ಹಾಡಿಗಿಂತ ಹೆಚ್ಚು ಪ್ರಬಲ ಅಸ್ತ್ರವೊಂದು ದೊರಕಿತ್ತು.... ಅದೇ ಅವರ ಮೌನ.... ಯಾರಾದರೂ ಬಹುಶಃ ಅವರ ಹಾಡಿನಿಂದ ತಪ್ಪಿಸಿಕೊಂಡಿರಬಹುದು; ಆದರೆ ಅವರ ಮೌನದಿಂದ ತಪ್ಪಿಸಿಕೊಳ್ಳುವುದು ಯಾರಿಗೂ ಸಾಧ್ಯವಿಲ್ಲ. ಇವು ಫ್ರಾನ್ಜ್ ಕಾಫ್ಕಾನ ಮಾತುಗಳು. ‘ಅನ್ಯಗ್ರಹ ಜೀವಿಗಳಿವೆಯೆ? ಎಂಬ ಲೇಖನ ಆರಂಭಕ್ಕೆ ಬಾಲಕೃಷ್ಣ ಇವನ್ನು ಬಳಸಿಕೊಂಡಿದ್ದಾರೆ. ನಿಸರ್ಗದ ನೆಲೆಯಲ್ಲಿ, ವಿಶ್ವದ ಅನಂತತೆಯಲ್ಲಿ ಮನುಷ್ಯನ ‘ಒಂಟಿತನದ ಹುದುಲನ್ನು ಪರಾಮರ್ಶಿಸುವ ವಿಜ್ಞಾನದ ಸಂಶೋಧನೆಗಳನ್ನು ಕುರಿತ ಲೇಖನವಿದು.
ಸೃಜನಶೀಲ ಬರವಣಿಗೆಗಳ ತೀವ್ರತರ ಸಂವೇದನೆಗಳು, ಹುಡುಕಾಟಗಳು ವಿಜ್ಞಾನದ ನೆಲೆಯಲ್ಲಿ ಸಾಕ್ಷಾತ್ಕಾರ ಕಾಣುತ್ತಿರುವ ಕಾಲವಿದು. ಇದಕ್ಕೆ ಪೂರಕವಾದ ಅನೇಕ ನಿದರ್ಶನಗಳನ್ನು ಕ್ವಾಂಟಂ ವಿಜ್ಞಾನದಲ್ಲಿ ಕಾಣುತ್ತಿದ್ದೇವೆ. ಪತ್ರಿಕೆಯಲ್ಲಿ ಅಗ್ನಿ ಶ್ರೀಧರ್‌ರವರು ಬರೆಯುತ್ತಿರುವ ‘ಕ್ವಾಂಟಂ ಜಗತ್ತು ಅಂಕಣ ಈಗಾಗಲೇ ಸಾಮಾಜಿಕ, ಸಾಂಸ್ಕೃತಿಕ, ಸೃಜನಶೀಲ ಬರಹ ಚಿಂತನೆಗಳಲ್ಲಿ ವಿಜ್ಞಾನ ಒಡನಾಡಿರುವ ನೂರಾರು ನಿದರ್ಶನಗಳನ್ನು ಹಿಡಿದುಕೊಟ್ಟಿದ್ದಾರೆ. ‘ಅನ್ಯಗ್ರಹ ಜೀವಿಗಳಿವೆಯೆ? ಲೇಖನದಲ್ಲಿ ಜೆ.ಬಾಲಕೃಷ್ಣ ಕೂಡ ಕಳೆದ ಶತಮಾನದ ಪ್ರಭಾವಿ ಬರಹಗಾರನಾದ ಕಾಫ್ಕಾನ ಸಂವೇದನೆಗಳೊಂದಿಗೆ ವಿಜ್ಞಾನದ ಪ್ರಯೋಗಗಳು ವಿಸ್ತರಣೆ ಕಂಡು ಪರಮ ಸತ್ಯದ ತಡಕಾಟ ನಡೆಸುತ್ತಿರುವುದನ್ನು ಮುಂದಿಟ್ಟಿದ್ದಾರೆ. ಮೈಂಡ್ ಮ್ಯಾನಿಪ್ಯುಲೇಶನ್‌ನಿಂದ ಮೊದಲ್ಗೊಂಡು ಹೆನ್ರಿಟಾ ಲ್ಯಾಕ್ಸ್‌ಳ ಅಮರ ಕಥೆಯ ತನಕ ವಿಜ್ಞಾನದ ವೇದಿಕೆ ಏರಿ ಹುಡುಕಾಡಿರುವ ಬಾಲಕೃಷ್ಣ ಜನರ ಬದುಕಿನ ವಿವೇಕದೊಂದಿಗೆ ತಮ್ಮ ಬರಹಗಳನ್ನು ಸಾದ್ಯಾಂತವಾಗಿಸಿರುವುದು ಅನನ್ಯವಾದದ್ದು.
ಕೃಷ್ಣಮೂತಿ ಬಿಳಿಗೆರೆಯ ಪುಸ್ತಕ ಇದಕ್ಕಿಂತ ಭಿನ್ನವಾದದ್ದು. ಈ ನೆಲದ ಬಹುಸಂಖ್ಯೆಯ ರೈತಾಪಿ ಕಡುಬುದಾರರ ಅನುದಿನದ ಬದುಕು, ಬವಣೆ, ಖುಷಿಗಳಿಗೆ ಸಂಬಂಧಿಸಿದ್ದು. ವಿಜ್ಞಾನ ಹೇಳುವ ಸತ್ಯಕ್ಕೆ ಒಂದು ಕಠೋರತೆ ಇರುತ್ತದೆ. ಅದು ಅನೇಕ ಬಾರಿ ತನ್ನನ್ನು ಪೋಷಿಸಿದವರ ಬಣ್ಣವನ್ನೇ ಬಯಲು ಮಾಡಿಬಿಡುತ್ತದೆ. ಬಾಲಕೃಷ್ಣರ ‘ಮನಸ್ಸಿಗೇ ಮೂಗುದಾರ - ಒಂದು ಜಾಗತಿಕ ಪಿತೂರಿ ಎಂಬ ಲೇಖನ ಅಭಿಪ್ರಾಯ ಸೃಷ್ಟಿಯನ್ನು ಅರ್ಥಾತ್ ಮೈಂಡ್ ಮ್ಯಾನಿಪ್ಯುಲೇಶನ್ ಅನ್ನು ಸಾಮೂಹಿಕವಾಗಿ ಏರ್ಪಡಿಸುವ ಅಂಶಗಳ ಕುರಿತು ವೈಜ್ಞಾನಿಕವಾಗಿ ಪ್ರಸ್ತುತಪಡಿಸಿದೆ. ಇಂಥಾ ಪ್ರಯೋಗಗಳು ಅಭಿವೃದ್ಧಿ, ಪ್ರಗತಿ ಹೆಸರಲ್ಲಿ ಪಶ್ಚಿಮದ ದೇಶಗಳಿಂದ ಹೇಗೆ ಆಚರಣೆ ಕಾಣುತ್ತವೆ ಎಂಬುದನ್ನು ನಿದರ್ಶನಗಳ ಸಮೇತ ಬಿಡಿಸಿಟ್ಟಿದ್ದಾರೆ. ಮೈಂಡ್ ಮ್ಯಾನಿಪ್ಯುಲೇಶನ್ ವಿಚಾರವಾಗಿ ಪ್ರಯೋಗಗಳಿಗೆ ಆ ದೇಶಗಳು ಖರ್ಚು ಮಾಡುತ್ತಿರುವ ಹಣದ ಬಗ್ಗೆ ಎಲ್ಲರಿಗೂ ಅರಿವಿದೆ.
ಅದೇ ಪ್ರಯೋಗಗಳು ಫಲಿತಾಂಶದಲ್ಲಿ ಅರಬ್ ಮೇಲಿನ ಯುದ್ಧವನ್ನು ‘ಪ್ರಜಾಪ್ರಭುತ್ವದ ಉಳಿವು ಎಂದು ಬಿಂಬಿಸಲು, ಗ್ಯಾಟ್ ಒಪ್ಪಂದದ ಕರಾಳತೆಯನ್ನು ‘ಅಭಿವೃದ್ಧಿ ಎಂದು ನಂಬಿಸಲು ನಡೆಸುತ್ತಿರುವ ನಿದರ್ಶನಗಳು ಚರ್ಚೆಯಾಗಿವೆ. ಇಂಥಾ ಅಭಿಪ್ರಾಯ ಸೃಷ್ಟಿಯ ಅಪಾಯ ಯಾವ ಮಟ್ಟದಲ್ಲಿ ಇನ್ನೊಂದು ಸಮುದಾಯದ, ದೇಶದ ಜನರನ್ನು ಧ್ವಂಸ ಮಾಡಬಲ್ಲದು ಎಂಬುದನ್ನು ಕೃಷ್ಣಮೂರ್ತಿಯವರ ‘ಬೇಸಾಯವ ಮಾಡಿ ಪುಸ್ತಕದಲ್ಲಿ ನೋಡಬಹುದು. ನೀತಿ ರೂಪಿಸುವ ನಮ್ಮ ಪಾರ್ಲಿಮೆಂಟ್‌ನ ಮೈಂಡ್‌ಸೆಟ್ ಹೇಗೆ ಅಮೆರಿಕಾದ ‘ಅಭಿವೃದ್ಧಿ ಅಭಿಪ್ರಾಯದ ಸೃಷ್ಟಿಗೆ ಕೊರಳು ಕೊಟ್ಟು, ಗ್ಯಾಟ್‌ಗೆ ಸಹಿಹಾಕಿತು. ಇದರಿಂದ ರೈತಾಪಿ, ಕೂಲಿಕಾರ, ಕಾರ್ಮಿಕ ಸೇರಿದಂತೆ ಭಾರತದ ಸಮಗ್ರ ದುಡಿಯುವ ಜನರ ಪಾಲಿಗೆ ‘ಗ್ಯಾಟ್ ಒಪ್ಪಂದ ಹೇಗೆ ನರಕ ಸೃಷ್ಟಿಸಿದೆ ಎಂಬುದನ್ನು ಬಿಳಿಗೆರೆ ಬಿಡಿಸಿಟ್ಟಿದ್ದಾರೆ.
ಹಳ್ಳಿಯ ಜನರ ಬದುಕನ್ನು ಅರ್ಥಹೀನಗೊಳಿಸಲು ಎಂಥೆಂಥಾ ಪ್ರಯತ್ನಗಳು ನಡೆಯುತ್ತಿವೆ; ಅವುಗಳನ್ನು ಮೀರಬೇಕಾದರೆ ಇರಿಯುವ ಅಸ್ತ್ರದ ವಿರುದ್ಧ ನಾವು ರೂಪಿಸಿಕೊಳ್ಳಬೇಕಾದ ಬೆವರ ಶಾಸ್ತ್ರ ಯಾವುದು ಎಂಬುದನ್ನು ಪುಸ್ತಕ ಹೇಳುತ್ತದೆ. ಪುಸ್ತಕದ ಮೊದಲ ಭಾಗದಲ್ಲಿ ಕೃಷಿಗೆ ಬಿದ್ದಿರುವ, ಬೀಳುತ್ತಿರುವ ಹೊಡೆತಗಳ ಚರ್ಚೆ ನಡೆದಿದೆ. ಎರಡನೆಯ ಭಾಗದಲ್ಲಿ ಹೊಲ, ತೋಟಗಳ ಮಣ್ಣು, ನೀರಿನ ಸಂಗತಿಗಳಿಂದ ಕ್ರಿಮಿಕೀಟಗಳ ತನಕ ಚರ್ಚಿಸಿ ಕೃಷಿಯ ಉಳಿವಿನ, ಲಾಭದಾಯಕತೆಯ ಹಾದಿಗಳ ಹುಡುಕಾಟವಿದು.
ರೈತರ ಆತ್ಮಹತ್ಯೆಗಳ ಸುಳಿ ಹೇಗೆ ಸುಳ್ಳು ಅಭಿಪ್ರಾಯಗಳ ಮೇಲೆ ನಿಂತಿದೆ; ಅದರಿಂದ ಹೊರಬರಬೇಕಾದರೆ ರೈತ ಏನು ಮಾಡಬೇಕು ಎಂಬ ನೆಲೆಯಲ್ಲಿ ನಡೆದಿರುವ ಈ ಪುಸ್ತಕ ರೈತರಿಗೆ ಅತ್ಯಗತ್ಯದ್ದು. ಬಹು ಜನರ ಕ್ರಿಯಾಶೀಲತೆಗೆ ಸಂಬಂಧಿಸಿದ; ಆ ಕ್ರಿಯೆಯ ಮೇಲೆ ಪರಿಣಾಮ ಮಾಡಬಲ್ಲ ಶಕ್ತಿ ಇರುವ ಕಾರಣದಿಂದಲೇ ಇವೆರಡೂ ಕೃತಿಗಳಿಗೆ ಮಹತ್ವ ಇರುವುದು. ಇಂಥಾ ಮಹತ್ವ ಓದುಗರಿಗೆ ತಲುಪಿದಾಗ ಮಾತ್ರ ಅದು ಸಾರ್ಥಕತೆ. ಈ ನಿಟ್ಟಿನಲ್ಲಿ ಎರಡೂ ಓದಲೇಬೇಕಾದ ಪುಸ್ತಕಗಳು. ‘ಬೇಸಾಯವ ಮಾಡಿ ಕೃತಿಯನ್ನು ಕನ್ನಡ ಸಾಹಿತ್ಯ ಪರಿಷತ್ ಪ್ರಕಟಿಸಿದ್ದರೆ, ‘ಮಳೆಬಿಲ್ಲ ನೆರಳು ಕೃತಿಯನ್ನು ಬರಹ ಪಬ್ಲಿಷಿಂಗ್ ಹೌಸ್ ಪ್ರಕಟಿಸಿದೆ.

*******

ನನ್ನ ಪುಸ್ತಕಗಳ ಬಿಡುಗಡೆ ಹಾಗೂ ನನ್ನ ವ್ಯಂಗ್ಯಚಿತ್ರಗಳ ಪ್ರದರ್ಶನ

ನನ್ನ `ನೆನಪುಗಳಿಗೇಕೆ ಸಾವಿಲ್ಲ?' (ಕಥಾ ಸಂಕಲನ) ಮತ್ತು `ಮಳೆಬಿಲ್ಲ ನೆರಳು' (ವಿಜ್ಞಾನ ಲೇಖನಗಳ ಸಂಕಲನ) ಕೃತಿಗಳ ಬಿಡುಗಡೆ 26/04/2011ರಂದು ಕನ್ನಡ ಭವನದ `ನಯನ' ಸಭಾಂಗಣದಲ್ಲಿದಲ್ಲಿ ನಡೆಯಿತು. ಬರಹ ಪಬ್ಲಿಷಿಂಗ್ ಹೌಸ್ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಡಾ. ಜಿ ರಾಮಕೃಷ್ಣ ಕೃತಿಗಳ ಲೋಕಾರ್ಪಣೆ ಮಾಡಿದರು. `ನೆನಪುಗಳಿಗೇಕೆ ಸಾವಿಲ್ಲ?' ಕಥಾ ಸಂಕಲನವನ್ನು ಡಾ.ಕೆ ವೈ ನಾರಾಯಣ ಸ್ವಾಮಿ ಪರಿಚಯಿಸಿದರು ಹಾಗೂ `ಮಳೆಬಿಲ್ಲ ನೆರಳು' ವಿಜ್ಞಾನ ಲೇಖನಗಳ ಸಂಕಲನವನ್ನು ಮಂಜುನಾಥ ಅದ್ದೆ ಪರಿಚಯಿಸಿದರು. ಪ್ರಕಾಶಕರಾದ ಡಾ. ಎಂ ಬೈರೇಗೌಡ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ನಾನು ರಚಿಸಿದ ವ್ಯಂಗ್ಯ ಚಿತ್ರಗಳ ಪ್ರದರ್ಶನವನ್ನೂ ಹಮ್ಮಿಕೊಳ್ಳಲಾಗಿತ್ತು.

ಚಿತ್ರ ಕೃಪೆ: ಶಿವಪ್ರಸಾದ್, http://avadhimag.com/?p=33264


ಬಿಡುಗಡೆಯಾದ ಪುಸ್ತಕಗಳ ಪರಿಚಯ ಇಲ್ಲಿದೆ:
ಮಳೆಬಿಲ್ಲ ನೆರಳು- ವಿಜ್ಞಾನ ಲೇಖನಗಳ ಸಂಕಲನ
ಪುಟಗಳು:244, ಬೆಲೆ ರೂ.150-00
ಪ್ರಕಾಶಕರು: ಬರಹ ಪಬ್ಲಿಶಿಂಗ್ ಹೌಸ್, ಹಂಪಿನಗರ, ಬೆಂಗಳೂರು-560104
"ಮೇಲುನೋಟಕ್ಕೆ ವಿಜ್ಞಾನದ ಲೇಖನಗಳು ಎಂಬಂಥೆ ತೋರಿದರೂ ಸೂಕ್ಷ್ಮ ಮತ್ತು ಸಮಗ್ರ, ವೈಯುಕ್ತಿಕ ಮತ್ತು ಸಾಮಾಜಿಕ ಸ್ಥಳೀಯ ಮತ್ತು ಜಾಗತಿಕ ಎಂಬ ಧ್ರುವೀಕರಣವಿಲ್ಲದ ಅಖಂಡ ಗ್ರಹಿಕೆ ಮತ್ತು ಸಂಕೀರ್ಣ ನೇಯ್ಗೆಯ ಮೂಲಕ ಕೇವಲ ಮಾಹಿತಿಯ ತಂತ್ರಜ್ಞಾನವಾಗುಳಿಯದೆ ಸಂಸ್ಕೃತಿ ಚಿಂತನೆಯ ನಿಜೋದಯವಾಗಿ ಸ್ಥಿತ್ಯಂತರಗೊಂಡಿರುವ ಇಲ್ಲಿನ ಬರೆಹಗಳನ್ನು `ನಿರಂಕುಶ ಸಾಹಿತ್ಯ'ವೆಂದೇ ಕರೆಯಲಿಚ್ಛಿಸುತ್ತೇನೆ. ಮಾನವ ಕೇಂದ್ರಿತವಾದ ಎಲ್ಲ ಬಗೆಯ ರಚನೆಗಳನ್ನು ನಿರಾಕರಿಸುತ್ತಾ ಉಳ್ಳವರು ಹುಟ್ಟುಹಾಕಿದ ಸುಳ್ಳು ಸೃಷ್ಟಿಯ `ಸಚರಾಚರವೆಲ್ಲ' ರಚನೆಗೆ ಬಾರದಂದಿನ ನೆಲೆಗೆ ನಮ್ಮನ್ನು ಕರೆದೊಯ್ಯುವ ಇಲ್ಲಿನ ಬರೆಹಗಳು ಅಪರಿಮಿತದ ಕತ್ತಲೆಯೊಳಗೆ ಈಜುತ್ತಿರುವ ವಿಪರೀತದ ಬೆಳಕಿನ ಹುಳುಗಳಾಗಿ ಕಾಣುತ್ತವೆ."
- ಪ್ರೊ.ವಿ.ಚಂದ್ರಶೇಖರ ನಂಗಲಿ
"ಪ್ರತಿ ಪ್ರಬಂಧದಲ್ಲಿಯೂ ಓದುಗನನ್ನು ತನ್ನದೆ ಅವಲೋಕನೆಯತ್ತ ನೂಕಿ, ಆ ಪ್ರಬಂಧ ರಚನೆಯಲ್ಲಿಯೇ ತಾನೂ ಒಂದು ಪಾತ್ರವಾಗುವಂತೆ ಪ್ರೇರೇಪಿಸುತ್ತಾರೆ. ಇದು ಬಾಲು ಅವರ ಲೇಖನಗಳ ಅನನ್ಯತೆ. ಬಹುಶಃ ಈ ವಿಭಿನ್ನತೆಗೆ ಕಾರಣ - `ವಿಜ್ಞಾನದಲ್ಲಿ ರಹಸ್ಯ ಬಗೆದಷ್ಟೂ ನಿಗೂಢ ಹೆಚ್ಚುತ್ತಾ ಹೋಗುತ್ತದೆ. ಆ ನಿಗೂಢದ ಬೆಡಗೇ ಜೀವನ ಪ್ರೀತಿಯ ಮೂಲ ಸೆಲೆ' ಎಂಬ ಅವರ ನಂಬಿಕೆ. ಈ ನಂಬಿಕೆಯಿಂದಲೇ ಬರೆಯುವ ಅವರು ತಮ್ಮೆಲ್ಲ ಲೇಖನಗಳಲ್ಲೂ, ವಿಜ್ಞಾನವನ್ನು ಓದುಗನ ಆಂತರ್ಯದ ಸಮೀಪಕ್ಕೆ ತಂದಿಡುವ ಕುಶಲತೆಯನ್ನು ಅಳವಡಿಸಿಕೊಂಡಿರುವುದು ವಿಶೇಷ."
- ಡಾ.ಕೆ.ಎನ್.ಗಣೇಶಯ್ಯ


ನೆನಪುಗಳಿಗೇಕೆ ಸಾವಿಲ್ಲ? - ಕಥಾ ಸಂಕಲನ; ಡಾ. ಜೆ.ಬಾಲಕೃಷ್ಣ
ಪುಟಗಳು:146; ಬೆಲೆ ರೂ.100-00
ಪ್ರಕಾಶಕರು: ಬರಹ ಪಬ್ಲಿಶಿಂಗ್ ಹೌಸ್, ಹಂಪಿನಗರ, ಬೆಂಗಳೂರು-560104
ಇದು ನನ್ನ ಮೊದಲ ಕಥಾ ಸಂಕಲನ. ನಾನು 1983ರಿಂದ ಬರೆದ ಹದಿನಾಲ್ಕು ಕತೆಗಳು ಇಲ್ಲಿವೆ. ಸಾವಿರಾರು ವರ್ಷಗಳ ಹಿಂದೆ ಆದಿಮಾನವ ಮಾಡಿದ ಕೆಲಸವನ್ನೇ ನಾನು ಮಾಡಿದ್ದೇನೆ. ಬಾಲ್ಯದಿಂದ ಇದುವರೆಗಿನ ನನ್ನ ಬದುಕಿನ ಅಲ್ಲೊಂದು ಇಲ್ಲೊಂದು ಎಳೆಯನ್ನು ತೆಗೆದು ಅದಕ್ಕೆ ನನ್ನ ಕಲ್ಪನೆಯ ಮತ್ತೊಂದಷ್ಟು ಎಳೆಗಳನ್ನು ಸೇರಿಸಿ `ಕತೆ ಕಟ್ಟುವ' ಪ್ರಯತ್ನ ಮಾಡಿದ್ದೇನೆ.


******

ಕೇಂದ್ರ ಸಾಹಿತ್ಯ ಅಕಾದೆಮಿಯಿಂದ ನಾನು ಅನುವಾದಿಸಿರುವ 'ಭಾರತದ ಮೊದಲ ಕಾದಂಬರಿಗಳು' ಇತ್ತೀಚೆಗೆ ಪ್ರಕಟವಾಗಿದೆ. ಅದರ ಪರಿಚಯವನ್ನೂ ಇಲ್ಲಿ ನೀಡಿದ್ದೇನೆ.

ಭಾರತದ ಮೊದಲ ಕಾದಂಬರಿಗಳು: ಮೂಲ ಸಂಪಾದಕರು: ಮೀನಾಕ್ಷಿ ಮುಖರ್ಜಿ
ಕನ್ನಡ ಅನುವಾದ: ಜೆ.ಬಾಲಕೃಷ್ಣ
ಪುಟಗಳು: 21+282; ಬೆಲೆ:ರೂ.175-00
ಪ್ರಕಾಶಕರು: ಸಾಹಿತ್ಯ ಅಕಾದೆಮಿ; ನವದೆಹಲಿ
ಯಾವುದೇ ಸಾಹಿತ್ಯ ಪ್ರಕಾರದ ಪ್ರಾರಂಭ ಮಸುಕು ಮಸುಕಾಗಿರುವಂತೆ ಭಾರತೀಯ ಕಾದಂಬರಿಗಳ ಪ್ರಾರಂಭವೂ ಮಸಕು ಮಸುಕಾಗಿದೆ. ಹತ್ತೊಂಬತ್ತನೇ ಶತಮಾನದಲ್ಲಿ ಬ್ರಿಟಿಷರು ಪರಿಚಯಿಸಿದ ಇಂಗ್ಲಿಷ್ ಶಿಕ್ಷಣದ ನೇರ ಪರಿಣಾಮದಿಂದಾಗಿ ಭಾರತದ ಕಾದಂಬರಿ ಒಂದು ಎರವಲು ಪ್ರಕಾರವೆಂಬ ಅನಿಸಿಕೆ ಬಹಳ ಕಾಲ ಪ್ರಶ್ನಾತೀತವಾಗಿ ಉಳಿದಿತ್ತು. ಆದರೆ ಇಂತಹ ಸಿದ್ಧಾಂತಗಳನ್ನು ಮರುಪರೀಕ್ಷಿಸುವ ಮತ್ತು ಭಾರತದಂತಹ ಬಹುಸಂಸ್ಕೃತಿಯ ಹಾಗೂ
ಬಹು ಭಾಷಾ ಪರಂಪರೆ ಆಯಾ ಚಾರಿತ್ರಿಕ-ಸಾಮಾಜಿಕ ಘಟ್ಟಗಳಲ್ಲಿ ಸಾಹಿತ್ಯದ ಈ ಪ್ರಕಾರದ ಮೇಲೆ ಬೀರಿರುವ ಪರಿಣಾಮಗಳನ್ನು ಈ ಕೃತಿ ಪರಿಶೋಧಿಸುವ ಪ್ರಯತ್ನ ಮಾಡುತ್ತದೆ. ಭಾರತದಲ್ಲಿ ಹತ್ತೊಂಬತ್ತನೆಯ ಶತಮಾನದ ಮಧ್ಯಭಾಗದಲ್ಲಿ ರಾಷ್ಟ್ರದ ಪರಿಕಲ್ಪನೆಯೊಂದಿಗೇ ಕಾದಂಬರಿ ಪ್ರಕಾರ ಉಗಮವಾಯಿತೆನ್ನುತ್ತಾರೆ ಕೆಲ ಸಾಹಿತ್ಯ ಚರಿತ್ರಕಾರರು. ಈ ಸಂಪುಟವು ಸಾಹಿತ್ಯ ವಿಮರ್ಶಕರು, ಚರಿತ್ರಕಾರರು ಮತ್ತು ರಾಜಕೀಯ ತಾತ್ವಿಕ ಸಿದ್ಧಾಂತಕಾರರು ರಚಿಸಿರುವ ಹದಿನಾಲ್ಕು ಪ್ರಬಂಧಗಳನ್ನು ಒಳಗೊಂಡಿದೆ ಹಾಗೂ ಅವು ವಿವಿಧ ಭಾರತೀಯ ಭಾಷೆಗಳಲ್ಲಿನ ಮೊದಲ ಕಾದಂಬರಿಗಳನ್ನು ಮತ್ತು ಅವು ರಚನೆಗೊಂಡ ಸಂದರ್ಭಗಳನ್ನು ಪರಾಮರ್ಶಿಸುತ್ತದೆ.
******
ಕನ್ನಡ ವಿಶ್ವವಿದ್ಯಾಲಯ, ಹಂಪಿ `ಕೃಷಿವಿಜ್ಞಾನ ಸಾಹಿತ್ಯ ನಡೆದು ಬಂದ ಹಾದಿ'


ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ ನನ್ನ `ಕೃಷಿವಿಜ್ಞಾನ ಸಾಹಿತ್ಯ ನಡೆದು ಬಂದ ಹಾದಿ' ಎಂಬ ಕೃತಿಯನ್ನು ಪ್ರಕಟಿಸಿದೆ. ಅದರ ಕಿರು ಪರಿಚಯ ಈ ಮುಂದಿನಂತಿದೆ:
`ಕೃಷಿವಿಜ್ಞಾನ ಸಾಹಿತ್ಯ ನಡೆದು ಬಂದ ಹಾದಿ' ಒಂದು ಅಪೂರ್ವ ಮಾಹಿತಿಗಳನ್ನು ಒಳಗೊಂಡ ಕಿರುಪುಸ್ತಕ. ಕೃಷಿಗೆ ಸಂಬಂಧಿಸಿದಂತೆ ಪಾರಂಪರಿಕವಾದ ಜ್ಞಾನ ಮಾತ್ರವಿದ್ದು ಅವುಗಳನ್ನು ತಲೆಮಾರಿನಿಂದ ತಲೆಮಾರಿಗೆ ಉಳಿಸಿಕೊಂಡು ಬರಲಾಗಿದೆ. ಹಿಂದೆ ಕೃಷಿಯು ಜೀವಕ್ಕೆ ಅನಿವಾರ್ಯವಾದ ಆಹಾರವನ್ನು ಉತ್ಪಾದಿಸುವ ಒಂದು ಕೆಲಸ ಎಂಬ ಭಾವನೆ ಮಾತ್ರ ಇತ್ತು. ಇಂದು ಕೃಷಿ ಲಾಭ ತಂದುಕೊಡುವ ಒಂದು ವ್ಯವಹಾರವೇ ಆಗಿದೆ. ಇಂತಹ ಸಂದರ್ಭದಲ್ಲಿ ಆಧುನಿಕ ವಿಜ್ಞಾನದ ಬೆಳವಣಿಗೆಯ ಮೂಲಕ ಕೃಷಿಯು ಸಾಗುವಳಿ ಪದ್ಧತಿಯಲ್ಲಿ ಸುಧಾರಣೆ ಹಾಗೂ ಇಳುವರಿಯಲ್ಲಿನ ಹೆಚ್ಚಳ ಇವೆಲ್ಲದರ ಮೂಲಕ ಒಂದು ಉದ್ಯಮವಾಗಿ ಬೆಳೆದು ನಿಂತಿದೆ. ಪಾರಂಪರಿಕ ಕೃಷಿ ಪದ್ಧತಿಯಿಂದ ಆಧುನಿಕ ವಾಣಿಜ್ಯ ವ್ಯವಸಾಯ ಪದ್ಧತಿಗಳವರೆಗಿನ ಬೆಳವಣಿಗೆಯಲ್ಲಿ ಕೃಷಿವಿಜ್ಞಾನ ಕ್ಷೇತ್ರದಲ್ಲಿ ದುಡಿದ ವ್ಯಕ್ತಿಗಳ, ಸಂಘಸಂಸ್ಥೆಗಳ ಚಿಂತನೆಗಳು ಮಿಳಿತವಾಗಿವೆ. ಹೀಗೆ ಕೃಷಿ ಅಭಿವೃದ್ಧಿಯ ಕುರಿತ ಚಿಂತನೆಗಳು ಕೃಷಿವಿಜ್ಞಾನ ಎಂಬ ಹೊಸ ಜ್ಞಾನಶಾಖೆಯನ್ನು ರೂಪಿಸಿವೆ. ಈ ಜ್ಞಾನದ ವಿವರಣೆಗಳ ಸಾಹಿತ್ಯದ ಸ್ವರೂಪವನ್ನು ಈ ಕೃತಿ ಸ್ಥೂಲವಾಗಿ ವಿವರಿಸಿದೆ. ಜೆ.ಬಾಲಕೃಷ್ಣ ಅವರು ಮೂಲತಃ ವಿಜ್ಞಾನ ಲೇಖಕರಾಗಿರುವುದರಿಂದ ಅವರ ಅಧ್ಯಯನದ ಅಗಾಧತೆಯು ಈ ಕೃತಿಯಲ್ಲಿ ಅನಾವರಣಗೊಂಡಿದೆ.
-ಡಾ.ಎ.ಮುರಿಗೆಪ್ಪ
ಕುಲಪತಿ

******
ಕೃಷಿ ವಿಶ್ವವಿದ್ಯಾನಿಲಯ, ಹೆಬ್ಬಾಳ, ಬೆಂಗಳೂರು:
ಕೃಷಿಯಲ್ಲಿ ಬೌದ್ಧಿಕ ಆಸ್ತಿ ಹಕ್ಕು ಹಾಗೂ ಸಾಂಪ್ರದಾಯಕ ಜ್ಞಾನ
ಮೂಲ: ತೇಜಸ್ವಿನಿ ಆಪ್ಟೆಸಂಗ್ರಹಾನುವಾದ: ಡಾ. ಜೆ.ಬಾಲಕೃಷ್ಣ
ಪ್ರಕಾಶಕರು: ಕನ್ನಡ ಅಧ್ಯಯನ ವಿಭಾಗ, ಕೃಷಿ ವಿಶ್ವವಿದ್ಯಾನಿಲಯ, ಹೆಬ್ಬಾಳ, ಬೆಂಗಳೂರು-೫೬೦೦೨೪
ಪುಟಗಳು: ೮೦
ಬೆಲೆ: ರೂ.೫೪-00

******

ಲಂಕೇಶ್ ಪ್ರಕಾಶನ, ಬೆಂಗಳೂರು

ಮಾಂಟೊ ಕತೆಗಳುಸಾದತ್ ಹಸನ್ ಮಾಂಟೊ (11.5.1972-18.1.1955) ಒಬ್ಬ ಮಹಾನ್ ಹಾಗೂ ವಿವಾದಾಸ್ಪದ ಉರ್ದು ಕತೆಗಾರ. ಭಾರತ,ಪಾಕಿಸ್ತಾನವಿಭಜನೆಯಿಂದ ತೀವ್ರ ಆಘಾತಕ್ಕೊಳಗಾದ ಮಾಂಟೊ ಆಗ ತಾನು ಕಂಡ ಕೋಮುಗಲಭೆಗಳ ಅಮಾನವೀಯ ಕ್ರೌರ್ಯದಿಂದತತ್ತರಿಸಿಹೋದ.ಕೆಲದಿನಗಳ ಹಿಂದೆಯಷ್ಟೇ ನೆರೆಹೊರೆಯವರು, ಗೆಳೆಯರಾಗಿದ್ದವರು ಪರಸ್ಪರ ಕೊಂದುಕೊಳ್ಳುವ ಅಮಾನವೀಯ, ಕ್ರೌರ್ಯಮನೋಭಾವಪಡೆದುಕೊಂಡದ್ದು ಮಾಂಟೋನಲ್ಲಿ ಆಘಾತ ಹಾಗೂ ದಿಗ್ಭ್ರಮೆ ಉಂಟುಮಾಡಿತ್ತು. ಭಾರತ, ಪಾಕಿಸ್ತಾನ ವಿಭಜನೆಯಾದಾಗ, ಎರಡೂದೇಶಗಳಲ್ಲಿ ನನ್ನ ದೇಶ ಯಾವುದೆಂದು ನಿರ್ಧರಿಸಲು ನನ್ನಿಂದ ಸಾಧ್ಯವಾಗಲೇ ಇಲ್ಲ ಎಂದಿದ್ದಾನೆ. ವಿಭಜನೆಯ ನಂತರಪಾಕಿಸ್ತಾನದಲಾಹೋರ್ಗೆ ಹೋದ ಮಾಂಟೊ ಅಲ್ಲಿ ಏಳು ವರ್ಷಗಳು ಬದುಕಿದ್ದ. ಏಳು ವರ್ಷಗಳು ಆತನ ಬದುಕಿನ ಸೆಣಸಾಟವೇ ಆಗಿತ್ತು.ಸೆಣಸಾಟದಲ್ಲೂ ಜಗತ್ತಿಗೆ ತನ್ನ ಮಹಾನ್ ಕೃತಿಗಳ ಕಾಣಿಕೆ ನೀಡಿದ. ಏಳೂ ವರ್ಷಗಳ ಬದುಕಿನ ಪಯಣ ಆತನನ್ನು ಸಾವಿಗೆ ಹತ್ತಿರಹತ್ತಿರಕೊಂಡೊಯ್ದವು. ಮಾಂಟೊ ಸತ್ತಾಗ ಆತನಿಗಿನ್ನೂ 43 ವರ್ಷ ತುಂಬಿರಲಿಲ್ಲ. ಅಷ್ಟರಲ್ಲೇ ಆತ 250ಕ್ಕೂ ಹೆಚ್ಚು ಸಣ್ಣ ಕತೆಗಳನ್ನು (22ಕಥಾಸಂಕಲನಗಳು), ಏಳು ರೇಡಿಯೋ ನಾಟಕ ಸಂಗ್ರಹಗಳನ್ನು, ಮೂರು ಪ್ರಬಂಧ ಸಂಗ್ರಹಗಳನ್ನು ಹಾಗೂ ಒಂದು ಕಿರುಕಾದಂಬರಿಯನ್ನುರಚಿಸಿದ್ದ.ಆತ ಬದುಕಿನಲ್ಲಿ ಎಲ್ಲವನ್ನೂ ಕಂಡಿದ್ದ- ಅತ್ಯಂತ ಜನಪ್ರಿಯತೆ, ಅಸೀಮ ದ್ವೇಷ, ತಾನು ಬಯಸದ ಅಪಮಾನ ಹಾಗೂ ಎಲ್ಲವನ್ನೂತನ್ನಕತೆಗಳಲ್ಲಿ ಹೇಳಿದ್ದ- ಜಗತ್ತೇ ತನ್ನನ್ನು ಅದ್ಭುತ ಕತೆಗಾರನೆಂದು ಕೊಂಡಾಡುವಂತೆ. ಈ ಮಹಾನ್ ಕತೆಗಾರನ ಆಯ್ದ ಕತೆಗಳ ಅನುವಾದ:
ಮಾಂಟೊ ಕತೆಗಳು
ಅನುವಾದ: ಜೆ.ಬಾಲಕೃಷ್ಣ
ಪ್ರಕಾಶಕರು: ಲಂಕೇಶ್ ಪ್ರಕಾಶನ, ಬೆಂಗಳೂರು
ಪುಟಗಳು: 121-00
ಬೆಲೆ:ರೂ: 80-೦0
ಮಾಂಟೊ ಕತೆಗಳು ಈ ವಾರದ (೦೩/೦೧/೨೦೧೦) 'ವಿಜಯ ಕರ್ನಾಟಕ'ದ ಟಾಪ್ ಟೆನ್ ಪಟ್ಟಿಯಲ್ಲಿದೆ.


Review in The Hindu dated 11/06/2010:http://www.hindu.com/fr/2010/06/11/stories/2010061150940400.htm
Manto Kathegalu by J. Balakrishna
Lankesh Prakashana, Rs. 80
Saadat Hasan Manto (1912-1955) was a great, but controversial Urdu writer.
Dr.J. Balakrishnaan Associate Professor at the Department of Kannada Studies, UAS, has translated around 11 eleven stories of the 250-odd short stories Manto wrote. Five in this collection standout: “Toba Tek Singh”, “Titwalna Naayi”, “Sheethala Mamsa”, “Prakhara Belakina Kone” and “Vaasane”. The first two pertain to the effect of Partition. Toba Teksingh begins with the decision of the governments to exchange lunatics and ends with the death of Bishansingh, after his resistance to be transferred to India. In “Titwalna Naayi”, a dog caught between the rival armies dies, after both play with it and then shoot it.
The book begins with an interesting curtain raiser about the life and works of Manto. He failed in Urdu in his matriculation exam, but went on to become a remarkable short story writer in the language. He could not even complete his college education, but his works have become textbooks.
Even though it is a collection of stories, Manto's letters ridiculing the United States between 1951 and 54 have also been included here as a separate section at the end. The last letter is ‘contrastingly' interesting.
“Kappu Tippanigalu” is not one story but a collection of anecdotes ranging from three lines to three pages. From the viewpoint of structure, it could have been placed elsewhere.
Overall, the book has succeeded reasonably in capturing the complex personality and the essence of the works of Manto.
H.S.MANJUNATHA

ಲಂಕೇಶ್ ಪ್ರಕಾಶನದ ಈ ಪುಸ್ತಕ `ಮಾಂಟೊ ಕತೆಗಳು' ಫ್ಲಿಪ್ ಕಾರ್ಟ್ ನಲ್ಲಿ ಲಭ್ಯವಿದೆ. ಬೇಕಿರುವವರು ಈ ಲಿಂಕಿನ ಮೇಲೆ ಕ್ಲಿಕ್ಕಿಸಿ:

*******
ಕನಸೆಂಬ ಮಾಯಾಲೋಕ - ಉಚಿತ ಡೌನ್‌ಲೋಡ್‌ಗೆ ಲಭ್ಯ
ನಿದ್ದೆಯ ಸಮಯದಲ್ಲಿ ಕನಸುಗಳು ಮೂಡುವ ಹಾಗೂ ಕನಸುಗಳ ಮೂಲಕ ಮನುಷ್ಯ ತನ್ನ ಆಸೆ, ಆಕಾಂಕ್ಷೆ ಹಾಗೂ ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ಬಗ್ಗೆ ವಿವರಿಸುತ್ತಾ ಕನಸುಗಳು ಯಾವ ರೀತಿ ಸೃಷ್ಟಿಯಾಗುತ್ತವೆಂಬುದನ್ನು ವಿಶ್ಲೇಷಿಸಿ ಕನಸುಗಳಲ್ಲಿ ಮೂಡುವ ಸಂಕೇತಗಳನ್ನು ವೈಜ್ಞಾನಿಕವಾಗಿ ವಿವರಿಸಲು ಲೇಖಕರು ಪ್ರಯತ್ನಿಸಿದ್ದಾರೆ. ಕನಸುಗಳ ಬಗ್ಗೆ ವೈಜ್ಞಾನಿಕ ವಿಷಯಗಳನ್ನು ಜನಸಾಮಾನ್ಯರಿಗೆ ಹಾಗೂ ಇತರರಿಗೆ ತಿಳಿಸುವಲ್ಲಿ ಈ ಕಿರುಹೊತ್ತಿಗೆ ಸಹಾಯಕವಾಗುವುದೆಂದು ನಮ್ಮ ನಂಬಿಕೆ. -ಪ್ರಕಾಶಕರುಡಾ.ಜೆ.ಬಾಲಕೃಷ್ಣ ಅವರ ಕನಸೆಂಬ ಮಾಯಾಲೋಕ ಪುಸ್ತಕವನ್ನು ಡೌನ್ ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ:
http://www.archive.org/download/KannadaEbook-KanasembaMayaloka/KanasembaMayaloka.pdf


ಮೇ 2015ರವರೆಗಿನ  ಡೌನ್‌ಲೋಡ್‌ಗಳು: 8187

ಮಿಥುನ- ಲೈಂಗಿಕ ಮನೋವಿಜ್ಞಾನದ ಬರಹಗಳು- ಉಚಿತ ಡೌನ್‌ಲೋಡ್‌ಗೆ ಲಭ್ಯ
ಕಾಮದ ನಿಜವಾದ ಬೆಳವಣಿಗೆ ಮನುಷ್ಯನ ಆರೋಗ್ಯ ಹಾಗೂ ಸಾರ್ವಾಂಗಿಕ ಬೆಳವಣಿಗೆಗೆ ಪೂರಕ ಮಾತ್ರವಲ್ಲದೆ ಅವನನ್ನು ದೈವಿಕ ಪ್ರಜ್ಞೆಗೂ ಏರಿಸುವ ಸುಲಭ ಸಾಧನವಾಗಬಲ್ಲದು. ಆದರೆ ಕಾಮದ ಬಗ್ಗೆ ಈಗಿರುವ ಮೌಢ್ಯತೆ, ಅನರ್ಥ, ಕಂದಾಚಾರ, ವಿಕೃತಿಗಳಿಂದ ಆ ಏಳಿಗೆ ಸಾಧ್ಯವಿಲ್ಲ. ಆದ್ದರಿಂದ ಸಾಮಾನ್ಯ ಜನತೆಗೆ ಕಾಮದ ಬಗ್ಗೆ ನಿಜ ಸತ್ಯಾಂಶಗಳನ್ನು, ವೈಜ್ಞಾನಿಕ ಸಂಗತಿಗಳನ್ನು ಬಿತ್ತಿಸುವುದು ಎಲ್ಲರ ಏಳಿಗೆಗೆ ಅತ್ಯಗತ್ಯ. ಈ ದಿಸೆಯಲ್ಲಿ ಜೆ.ಬಾಲಕೃಷ್ಣರ ಈ ಕೃತಿ ಅಮೂಲ್ಯವಾದದ್ದು. ಈ ಕೃತಿ ನಿಜ, ಅಪ್ಪಟ ಕಾಮದ ಪ್ರಜ್ಞೆ ಹೆಚ್ಚಿಸುವುದರ ಜೊತೆಗೆ ಬದುಕಿಗೆ-ಜೀವನಕ್ಕೆ ಮತ್ತೊಂದು ದೃಷ್ಟಿಕೋನವನ್ನು, ಹೊಸ ಅರಿವನ್ನೂ ಮೂಡಿಸಬಲ್ಲದು. -ಡಾ.ಎಂ.ಎಸ್.ತಿಮ್ಮಪ್ಪ
ಡಾ.ಜೆ.ಬಾಲಕೃಷ್ಣ ಅವರ ಮಿಥುನ- ಲೈಂಗಿಕ ಮನೋವಿಜ್ಞಾನದ ಬರಹಗಳು ಪುಸ್ತಕವನ್ನು ಡೌನ್ ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ:

ಮೇ 2015ರವರೆಗಿನ  ಡೌನ್‌ಲೋಡ್‌ಗಳು: 5885
ಲಕ್ಷ್ಮೀಪತಿ ಕೋಲಾರರವರ ನವಿಲು ಕಿನ್ನರಿ- ಉಚಿತ ಡೌನ್‌ಲೋಡ್‌ಗೆ ಲಭ್ಯ
ಇದು ಲಕ್ಷ್ಮೀಪತಿ ಅವರ ಚೊಚ್ಚಲು ಕೃತಿ ಎಂಬ ರಿಯಾಯಿತಿ ಈ ಕೃತಿಗೆ ಬೇಕಿಲ್ಲ. ಈ ಕವಿತೆಗಳಿಗೆ ಒಂದು ರೀತಿಯ ಸ್ವಯಂದೀಪಕತೆ ಇದೆ. ಹರೆಯದ ಈ ಕವಿಗೆ ಅನುಭವವನ್ನು ಹೇಗಾದರೂ ಉಡಾಯಸಿಬಿಡಬೇಕೆಂಬ ಹುಸಿ ಹುರುಪಿಲ್ಲ; ಏನು ಕಂಡರೂ ಬರ್ಫದ ಹಾಗಿದ್ದೇವೆ ಎಂದುಕೊಳ್ಳುವ ನಿರಂತರ ವ್ಯಸನಿಗಳ ಸಿನಿಕತನವಿಲ್ಲ; ಸಿದ್ಧಾಂತಗಳನ್ನು ಘೋಷಣೆ, ಹೇಳಿಕೆಗಳ ಮಟ್ಟದಲ್ಲಿ ಮಾತ್ರ ಗ್ರಹಿಸುವವರ ಪೋಸುದಾರಿಕೆ ಇಲ್ಲ. ಬದಲಾಗಿ ಮೊದಲು ಮಬ್ಬು ಮಬ್ಬಾಗಿ ಕಂಡರೂ ಗಮನವಿಟ್ಟು ಓದಿದಾಗ ಅಂತರ್ಜಲದಂತೆ ದುಮುದುಮಿಸುವ ಭಾವಗೀತಾತ್ಮಕತೆ ಈ ಕವಿತೆಗಳ ಕೆಳಗೆ ಹರಿಯುವುದು ಕಾಣಿಸುತ್ತದೆ. ಇಲ್ಲಿಯ ಕಿರುಗವಿತೆಗಳು ಮತ್ತು ನೀಳ್ಗವಿತೆಗಳೆರಡರಲ್ಲೂ ಎಲ್ಲ ಅನುಭವವನ್ನು ಒಂದು ಉತ್ಕಟ ಭಾವಕ್ಷಣದ ಪರಿಧಿಯೊಳಗೆ ತರುವ ಪ್ರಯತ್ನ ಜರುಗಿದೆ. `ರಂಜಾನಿನ ಕೊನೆಯ ರಾತ್ರಿ', `ಮಕ್ಕಲಿ ಘೊಶಾಲ್', `ಬಾವಲಿ' ಮೊದಲಾದ ಕವಿತೆಗಳನ್ನು ಮೊದಲ ಸಂಕಲನದಲ್ಲೇ ಬರೆದಿರುವ ಕವಿಗೆ ಯಾರ ಶಿಫಾರಸೂ ಬೇಕಿಲ್ಲ. -ಎಚ್.ಎಸ್.ಶಿವಪ್ರಕಾಶ
ಲಕ್ಷ್ಮೀಪತಿ ಕೋಲಾರ ಅವರ ನವಿಲು ಕಿನ್ನರಿ ಕವನ ಸಂಕಲನ ಡೌನ್ ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ:

ಮೇ 2015ರವರೆಗಿನ  ಡೌನ್‌ಲೋಡ್‌ಗಳು: 623


ಲಕ್ಷ್ಮೀಪತಿ ಕೋಲಾರರವರ ನೀಲಿ ತತ್ತಿ- ಉಚಿತ ಡೌನ್‌ಲೋಡ್‌ಗೆ ಲಭ್ಯ
`.........ರು ನಿಮ್ಮ `ನವಿಲು ಕಿನ್ನರಿ' ಕವನ ಸಂಗ್ರಹ ಓದಲೆಂದು ಕೊಟ್ಟರು. ಅವಸರದಲ್ಲಿ ಕೆಲವು ಪದ್ಯಗಳನ್ನು ಓದುತ್ತಿರುವಾಗ ನನಗಾದ ಸಂತೋಷವನ್ನು ಹಂಚಿಕೊಳ್ಳಲು ಈ ಪತ್ರ ಬರೆಯುತ್ತಿದ್ದೇನೆ. ನಿಮ್ಮದು ನೈಜವಾದ ಒಂದು ಹೊಸದನಿ ಕನ್ನಡದಲ್ಲಿ. ಮುಖಹೀನವಾಗುತ್ತಿರುವ ಕನ್ನಡದ ಕವನಗಳಿಂದ ಬೇಸತ್ತ ನನಗೆ ನಿಮ್ಮ 1989ರ ಸಂಕಲನವನ್ನು ಗಮನಿಸಲಿಲ್ಲವೆಂದು ಪಶ್ಚಾತ್ತಾಪವಾಯಿತು. ನಿಮ್ಮಿಂದ ಬಹಳ ಘನವಾದ ರಚನೆಗಳು ಬರುತ್ತಾವೆ ಎಂದು ತಿಳಿದಿದ್ದೇನೆ. ಭಾಷೆ, ಲಯ, ನಿಮ್ಮ ವೈಚಾರಿಕತೆ- ಎಲ್ಲವೂ ಗಾಢವಾದ ಅನುಭವವನ್ನು ಕಟ್ಟಬಲ್ಲ ದ್ರವ್ಯಗಳಾಗಿವೆ. ಯಾಕೆಂದರೆ ಅವು ನಿಮ್ಮ ಉತ್ಕಟ ಭಾವ ಕ್ಷಣದ ಅಂಶಗಳಾಗಿವೆ.....'
-ಯು.ಆರ್.ಅನಂತಮೂರ್ತಿ
ಲಕ್ಷ್ಮೀಪತಿ ಕೋಲಾರ ಅವರ ನೀಲಿ ತತ್ತಿ ಕವನ ಸಂಕಲನ ಡೌನ್ ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ:

ಮೇ 2015ರವರೆಗಿನ  ಡೌನ್‌ಲೋಡ್‌ಗಳು: 459

ಕಿಟ್ಟೆಲ್ ರವರ ಕನ್ನಡ ಮತ್ತು ಇಂಗ್ಲಿಷ್ ಶಾಲಾ ನಿಘಂಟು- ಉಚಿತ ಡೌನ್‌ಲೋಡ್‌ಗೆ ಲಭ್ಯ

ಕಿಟ್ಟೆಲ್ ರವರ ಕನ್ನಡ ಮತ್ತು ಇಂಗ್ಲಿಷ್ ಶಾಲಾ ನಿಘಂಟು (1899) ಡೌನ್ ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ:
http://www.archive.org/details/kannadaenglishsc00buchrich

ನವೆಂಬರ್ 2014ರವರೆಗಿನ ಡೌನ್‌ಲೋಡ್‌ಗಳು: 20954

ನನ್ನ ಇತರ ಕೃತಿಗಳು:


'ಡಾ.ಜೆ.ಬಾಲಕೃಷ್ಣ ಅವರ ಆಸಕ್ತಿಯ ವಲಯಗಳು ಜೀವವೈವಿಧ್ಯದಷ್ಟೇ ವಿಸ್ತಾರವಾದವು. ವಿಜ್ಞಾನದಿಂದ ಮೊದಲ್ಗೊಂಡು ಸಾಹಿತ್ಯ, ಸೂಫಿ. ಝೆನ್ ತತ್ವದರ್ಶನ ಗಳವರೆಗೆ ಹೊಕ್ಕಾಡಿದರೂ ಅಂತಿಮವಾಗಿ ಅವರ ಮನಸ್ಸು ನೆಲೆಗೊಳ್ಳುವುದು ಜೀವಕಾರುಣ್ಯದಲ್ಲೇ. ಕಾಲೂರಿದ ಲೌಕಿಕ ಬದುಕಿನ ಬೇರುಗಳಲ್ಲೇ ಅಲೌಕಿಕ ಗುಂಗು ಹೀರಬಲ್ಲರಾದರೂ ಮಣ್ಣಿನ ತಾಯಿ ಗುಣದಿಂದ ಅವರೆಂದೂ ದೂರವಾಗಿಲ್ಲ. ಚಿಂತನೆಗಳ ಶ್ರೇಷ್ಠತೆಗೆ ಸಹಜವಾಗಿ ತುಡಿದರೂ, ವ್ಯಸನಿಯಲ್ಲ. ಹಾಗಾಗಿಯೇ ಅವರ ಲೇಖನ ಅಭಿವ್ಯಕ್ತಿ ಸರಳತೆಯಲ್ಲೇ ಸೌಂದರ್ಯ ವನ್ನು ಹಿಡಿವ ಬಾಲ್ಯ ಸಂಭ್ರಮದ್ದು! ಖಭೌತದ ಅನಂತ ನಿಗೂಢತೆ, ನಿಸರ್ಗದ ನಿಷ್ಠುರ ಲಯಗಳು, ಮನುಷ್ಯರಾಳದ ಇನ್‌ಸ್ಟಿಂಕ್ಟ್‌ಗಳನ್ನು ಹಾಗೂ ಮನೋವಿಜ್ಞಾನದ ಅಜ್ಞಾತ ಪದರಗಳನ್ನು ಬಿಚ್ಚಿ, ತಡವಿನೋಡುವ ಅವರ ಅನನ್ಯ ಪ್ರಯೋಗಗಳಿಂದಾಗಿ ಅವರ ಬರವಣಿಗೆಗೆ ಕೌತುಕದ ಆಯಾಮಗಳೂ ದಕ್ಕುತ್ತವೆ'. -ಲಕ್ಷ್ಮೀಪತಿ ಕೋಲಾರ
ಈ ಪುಸ್ತಕಗಳನ್ನು ಪಡೆಯಲು ಲೇಖಕರನ್ನು ಸಂಪರ್ಕಿಸಿ: balukolar@yahoo.com
ನೀನೆಂಬ ನಾನು- ಸೂಫಿ ಎಂಬ ಮಾನಸಿಕ ಅವಸ್ಥೆ ಹಾಗೂ ಸೂಫಿ ಕತೆಗಳು
ಡಾ.ಜೆ.ಬಾಲಕೃಷ್ಣ


ಝೆನ್ ಮತ್ತು ಸೂಫಿ ತತ್ವಗಳು ಈ ಭೂಮಿಯ ಒಂದೇ ಹೃದಯದರಿವಿನ ಎರಡು ಕಣ್ಣುಗಳು. ಕಾಲ, ದೇಶಾತೀತವಾದ ಉನ್ನತ ತಿಳುವಳಿಕೆಯ ಸೋಪಾನಗಳು. ಇಹದ ಆಳವಾದ ತಿಳಿವನ್ನು ಒಳಗೊಂಡರೂ ಈ ಕತೆಗಳು ಪೂರ್ತಿ ಇಹದವಲ್ಲ, ಲೋಕೋತ್ತರ ಅನುಭಾವದ ಅರಿವಿದ್ದರೂ ಅವು ಪೂರ್ತಿ ಪರದವಲ್ಲ. ಇವನ್ನು ಖುಷಿಗಾಗಿ ಓದಬಹುದು, ಲೋಕಾನುಭವ ಹಾಗೂ ನೀತಿಗಳನ್ನು ಮನನ ಮಾಡಬಹುದು.ಮನೋಜಿಜ್ಞಾಸೆಗಳನ್ನು ಬಿಡಿಸಲು ಬಳಸಬಹುದು, ಅಥವಾ ಇನ್ನೂ ಹೆಚ್ಚಿನ ಪ್ರಯೋಜನವನ್ನೂ ಇವುಗಳಿಂದ ಪಡೆಯಬಹುದು. ಈ ಅನರ್ಘ್ಯ ಕತೆಗಳನ್ನು ಆಯಾ ಓದುಗರು ತಮಗೆ ಹೇಗೆ ಬೇಕೋ ಹಾಗೆ ಓದಬಹುದು. ಒಟ್ಟಾರೆ ಈ ಕತೆಗಳು `ಸಟೋರಿ'ಯ ಹಾಗೆ ಎಟುಕದ ಸತ್ಯಗಳನ್ನು ಮಿಂಚಿನಂತೆ ಹೊಳೆಯಿಸಿ ಬದುಕನ್ನಿಡೀ ಮಾಗಿದ ಹೃದಯದಿಂದ ನೋಡುವಂತೆ ಮಾಡಬಲ್ಲವು.
ಪುಟಗಳು:118 ಬೆಲೆ: ರೂ.೬೦
ನಳಂದ ಮಂಟಪ ಪ್ರಕಾಶನ, ಬೆಂಗಳೂರು
ಪುಟ್ಟ ರಾಜಕುಮಾರ
ಮೂಲ: ಆಂತ್ವಾನ್ ದ ಸೇಂತ್ ಎಕ್ಸೂಪರಿ ಕನ್ನಡಕ್ಕೆ: ಡಾ.ಜೆ.ಬಾಲಕೃಷ್ಣ


1943 ಮೊದಲು ಫ್ರೆಂಚ್ ಭಾಷೆಯಲ್ಲಿ ಪ್ರಕಟವಾದ ಈ ಪುಸ್ತಕ ಈಗಾಗಲೇ ವಿಶ್ವದ 125 ಭಾಷೆಗಳಿಗೆ ಅನುವಾದಗೊಂಡಿದೆ. ಈ ಕೃತಿಯನ್ನು ಸೇಂತ್ ಎಕ್ಸೂಪರಿ ಮಕ್ಕಳಿಗಾಗಿ ಬರೆದದ್ದೆ ಅಥವಾ ದೊಡ್ಡವರಿಗಾಗಿ ಬರೆದ ಮಕ್ಕಳ ಕತೆಯೆ? ಸೇಂತ್ ಎಕ್ಸೂಪರಿಯೇ ಹೇಳಿದಂತೆ, `ಎಲ್ಲಾ ದೊಡ್ಡವರು ಮೊದಲು ಮಕ್ಕಳಾಗಿದ್ದವರೆ. ಆದರೆ, ಅದನ್ನು ನೆನಪಿನಲ್ಲಿಟ್ಟುಕೊಳ್ಳುವವರು ಕೆಲವರು ಮಾತ್ರ.' ಸುಖ ಸಂತೋಷದ ಬದುಕಿನ ಅವಶ್ಯಕತೆಗಳು ತೀರಾ ಸರಳವಾದುವು ಹಾಗೂ ನಿಸ್ವಾರ್ಥತೆಯೇ ಸಿರಿಸಂಪತ್ತು ಎಂಬ ಸಂದೇಶವನ್ನು `ಪುಟ್ಟ ರಾಜಕುಮಾರ' ಸಾರುತ್ತಾನೆ. ಈ ಕತೆಯಲ್ಲಿ ಕೇಂದ್ರಿತವಾಗಿರುವ ಸಾವು, ಕೆಡುಕು ಹಾಗೂ ಹತಾಶೆಯ ಪ್ರತಿಮೆಗಳು ಓದಿದ ನಂತರವೂ ನಮ್ಮನ್ನು ಕಾಡುತ್ತಿರುತ್ತವೆ. ಒಂಟಿತನ ಕಾಡಲು ನಾವು ಒಂಟಿಯಾಗಿರಬೇಕಿಲ್ಲ, ಇತರರ ನಡುವೆಯೂ ನಮ್ಮನ್ನು ಒಂಟಿತನ ಕಾಡುತ್ತದೆ. ದೊಡ್ಡವರು ತಮ್ಮ ಹೃದಯವಂತಿಕೆಯಿಂದ ಜಗತ್ತನ್ನು ನೋಡಲು ಸಾಧ್ಯವಾಗದೆ ಅಂಕಿ‌ಅಂಶಗಳ ಮೂಲಕ ನೋಡುವುದು ಅವರನ್ನು ಬಲವಂತದ ಒಂಟಿತನಕ್ಕೆ ದೂಡುತ್ತದೆ ಎನ್ನುತ್ತಾರೆ ಲೇಖಕರು.
ಪುಟಗಳು: 96 ಬೆಲೆ: ರೂ.45/-
ಪ್ರಗತಿ ಗ್ರಾಫಿಕ್ಸ್, ಬೆಂಗಳೂರು

ಬೊಕಾಷಿಯೋನ ರಸಿಕತೆಗಳು
ಮೂಲ: ಜೇವಾನ್ನಿ ಬೊಕಾಷಿಯೊ, ಕನ್ನಡಕ್ಕೆ: ಡಾ.ಜೆ.ಬಾಲಕೃಷ್ಣ


ಜೇವಾನ್ನಿ ಬೊಕಾಷಿಯೊ (13೧೩-75) ಇಟಲಿಯ ಖ್ಯಾತ ಸಾಹಿತಿ ಹಾಗೂ ಮಾನವತಾವಾದಿ. ಆತ 1348-53ರ ಅವಧಿಯಲ್ಲಿ ರಚಿಸಿದ ಪ್ರಖ್ಯಾತ ಕೃತಿ `ಡೆಕಮೆರಾನ್'ನಿಂದ ಆಯ್ದ ಕತೆಗಳನ್ನು ಜೆ.ಬಾಲಕೃಷ್ಣ ಅನುವಾದಿಸಿದ್ದಾರೆ. ಈ ಕೃತಿಯನ್ನು ಡಾಂಟೆಯ
`ಡಿವೈನ್ ಕಾಮೆಡಿ'ಯ ನಂತರದ `ಹ್ಯೂಮನ್ ಕಾಮೆಡಿ' ಎಂದು ಕರೆಯಲಾಗುತ್ತದೆ. `ಡೆಕಮೆರಾನ್'ನನ್ನು ಇಟಲಿ ಸಾಹಿತ್ಯದ ಆದಿಮೂಲವೆಂದೂ ಪರಿಗಣಿಸಲಾಗಿದೆ. ಬೊಕಾಷಿಯೊ ಮಧ್ಯಯುಗದ ಧರ್ಮಾಧಿಕಾರಿಗಳ ಕಪಟ ಆಚರಣೆ, ಠಕ್ಕು, ಬೂಟಾಟಿಕೆಗಳ
ವಿರುದ್ಧವಿದ್ದ. ಅವರ ಕಪಟ ನಾಟಕಗಳನ್ನು, ಕಚ್ಚೆಹರುಕತನವನ್ನು ವಿಡಂಬನಾತ್ಮಕವಾಗಿ ಚಿತ್ರಿಸಿದ್ದಾನೆ. `ಡೆಕಮೆರಾನ್'ನ `ಅಶ್ಲೀಲ' ಕತೆಗಳು ಸಹ ಧಾರ್ಮಿಕ ವಾಸ್ತವತೆಯ ಅಂತರ್ಬೋಧೆ ಹಾಗೂ ನೈತಿಕ ಮೌಲ್ಯಗಳನ್ನು ಒತ್ತಿ ಹೇಳುತ್ತವೆ. ಆತನ ಕತೆಗಳಲ್ಲಿನ
ಪಾತ್ರಗಳು ಜೀವಂತಿಕೆಯಿಂದ ತುಡಿಯುತ್ತವೆ. ಹಾಗಾಗಿ ಬೊಕಾಷಿಯೋನನ್ನು ಅಶ್ಲೀಲ ಲೇಖಕನೆಂದಾಗಲಿ, ವಿಷಯಲಂಪಟ ಬರಹಗಾರನೆಂದಾಗಲಿ ಕರೆಯುವುದು ಆತನ ಸಾಹಿತ್ಯಕ್ಕೆ ಮಾಡುವ ಅಪರಾಧವಾಗುತ್ತದೆ.
ಪುಟಗಳು: 96 ಬೆಲೆ: ರೂ.45/-
ಪ್ರಗತಿ ಗ್ರಾಫಿಕ್ಸ್, ಬೆಂಗಳೂರು

ಮಾತಾಹರಿ
ಡಾ.ಜೆ.ಬಾಲಕೃಷ್ಣ


ಮಾತಾಹರಿಯ ಹೆಸರು ಬೇಹುಗಾರಿಕೆ, ನಿಗೂಢತೆ ಹಾಗೂ `ಸೆನ್ಶುಯಾಲಿಟಿ'ಯೊಂದಿಗೆ ಸೇರಿಹೋಗಿದೆ. ಸಾಧಾರಣ ಕುಟುಂಬದ ಈ ಹುಡುಗಿ ಅತಿ ಭವ್ಯ ಕನಸುಗಳನ್ನು ಕಂಡವಳು. ಬದುಕನ್ನು ಅತಿಯಾಗಿ ಪ್ರೀತಿಸುತ್ತಿದ್ದವಳು. ಆಕೆ ಗೂಢಚಾರಳಾಗಿದ್ದಳೇ ಎನ್ನುವುದು ಇಂದಿಗೂ ತಿಳಿದುಬಂದಿಲ್ಲ. ಮೊದಲನೆಯ ವಿಶ್ವಯುದ್ಧದ ಸಮಯದಲ್ಲಿ ಆಕೆಯ ಐಶಾರಾಮಿ ಬದುಕು, ಆಕೆಯ `ಗೆಳೆಯರ ವೃಂದ', `ವ್ಯಭಿಚಾರದ' ಬದುಕು ಆಕೆಯನ್ನು ಗುಮಾನಿಯಿಂದ ನೋಡುವಂತಿತ್ತು. ಬದುಕಲು ಬೇರೆ ದಾರಿ ಕಾಣದಾದಾಗ ಮಾತಾಹರಿ ತನ್ನ ದೇಹದ ಮೇಲಿನ ವಸ್ತ್ರಪರದೆಗಳನ್ನು ಒಂದೊಂದಾಗಿ ಜನರೆದುರು ತೆರೆದು ಅವರನ್ನು ಮೋಹಕಗೊಳಿಸಿದವಳು. ಭಾರತವನ್ನೇ ನೋಡಿರದಿದ್ದರೂ ತಾನೊಬ್ಬ ಬ್ರಾಹ್ಮಣ ಪೂಜಾರಿಯ ಹಾಗೂ ಕಾಳಿ ದೇವಿಯ ದೇವಸ್ಥಾನದ ದೇಗುಲ ನರ್ತಕಿಯ ಮಗಳೆಂದು ಹೇಳಿಕೊಂಡವಳು. ಅವಳ ಬದುಕಿನ ಪ್ರೀತಿ ಮತ್ತು `ಪೌರುಷ' ಯುದ್ಧದ ಕ್ರೌರ್ಯ ಮುಖಾಮುಖಿಯಾಗಿ ನಿಲ್ಲಲು ಸಾಧ್ಯವಿರಲಿಲ್ಲ. ಆ ಕ್ರೌರ್ಯಕ್ಕೆ ಬಲಿಯಾದವಳು ಮಾತಾಹರಿ.
ಪುಟಗಳು: 56 ಬೆಲೆ: ರೂ25/-
ಪ್ರಗತಿ ಗ್ರಾಫಿಕ್ಸ್, ಬೆಂಗಳೂರು

ಜೀವತಂತ್ರಜ್ಞಾನ ಅರ್ಥವಿವರಣಾ ಕೋಶ (ಇಂಗ್ಲಿಶ್- ಕನ್ನಡ)
ಡಾ.ಜೆ.ಬಾಲಕೃಷ್ಣ


ಜೀವತಂತ್ರಜ್ಞಾನದ ಸಂವಹನ ಭಾಷೆ ಇಂಗ್ಲಿಶ್ ಎನ್ನುವ ಭಾವನೆ ಸಾರ್ವತ್ರಿಕವಾಗಿದೆ. ಜೀವತಂತ್ರಜ್ಞಾನಕ್ಕೆ ಸಂಬಂಧಿಸಿದ ವಿಷಯ ಪ್ರಸ್ತಾಪಿಸುವಾಗ ಮೂಲಪದಗಾಳನ್ನು ಅರ್ಥ ಗೊತ್ತಿಲ್ಲದಿದ್ದರೂ ಬಳಸುವ ಪ್ರವೃತ್ತಿ ಜನಸಾಮಾನ್ಯರಲ್ಲಿದೆ. ಕೊರತೆ ನಿವಾರಿಸಲು
ಬೆಂಗಳೂರು ಕೃ.ವಿ.ವಿ. ರೈತರು, ಜನಸಾಮಾನ್ಯರಿಗೆ, ವಿದ್ಯಾರ್ಥಿಗಳಿಗೆ ಜೀವತಂತ್ರಜ್ಞಾನದ ಪಾರಿಭಾಷಿಕ ಶಬ್ದಗಳಿಗೆ ಕನ್ನಡದಲ್ಲಿ ಅರ್ಥ ಮತ್ತು ವಿವರಣೆ ನೀಡುವ ಕೃತಿಯನ್ನು ಪ್ರಕಟಿಸಿದೆ. ಲೇಖಕ ಜೆ.ಬಾಲಕೃಷ್ಣ ಜೀವತಂತ್ರಜ್ಞಾನದಲ್ಲಿ ಹೆಚ್ಚು ಬಳಕೆಯಾಗುವ
ಆಂಗ್ಲ ಪದಗಳಿಗೆ ಪರ್ಯಾಯವಾದ ಕನ್ನಡ ಪದಗಳು ಮತ್ತು ಅವುಗಳಿಗೆ ಸಂಕ್ಷಿಪ್ತವಾದ ಅರ್ಥಗಳ ವಿವರಣೆಯನ್ನೂ ಇಲ್ಲಿ ನೀಡಿದ್ದಾರೆ. ಕೆಲ ಪದಗಳಿಗೆ ಸೂಕ್ತವಾದ ಚಿತ್ರಗಳ ಮೂಲಕ ವಿವರಣೆ ಒದಗಿಸಿದ್ದಾರೆ. ಅರ್ಥ ಮತ್ತು ಅದಕ್ಕೆ ಪೂರಕವಾದ ವಿವರಣೆಗಳು ಆಸಕ್ತರ ಕುತೂಹಲ ನೀಗಿಸುತ್ತವೆ. (ಪ್ರಜಾವಾಣಿ).
ಪುಟಗಳು: 180 ಬೆಲೆ ರೂ. 50
ಕನ್ನಡ ಅಧ್ಯಯನ ವಿಭಾಗ, ಕೃಷಿ ವಿ.ವಿ., ಬೆಂಗಳೂರು

ವಿಶ್ವ ವಾಣಿಜ್ಯ ಸಂಸ್ಥೆಯ ಒಪ್ಪಂದದಿಂದಾಗಿ ಇಂದು ಭಾರತೀಯ ರೈತನ ಮೇಲೆ ಒಂದು ರೀತಿಯ ಕಪ್ಪು ಮೋಡ ಆವರಿಸಿದಂತಿದೆ. ನಾವು ಏಕಾಂಗಿಯಾಗಿ ಬದುಕಲಾರೆವಾದುದರಿಂದ ಒಂದು ರೀತಿಯಲ್ಲಿ ಜಾಗತಿಕ ವ್ಯಾಪಾರ ಸಂಬಂಧಗಳು ಅನಿವಾರ್ಯವೆಂಬುದು ಸತ್ಯ. ಆದರೆ ಅದರ ಪರಿಣಾಮಗಳನ್ನು ಸಂಪೂರ್ಣವಾಗಿ ವಿವೇಚಿಸದೆ ವಿಶ್ವ ವಾಣಿಜ್ಯ ಸಂಸ್ಥೆಯನ್ನು ನಾವು ಪ್ರವೇಶಿಸಿದ್ದೇವೆ. ಬಹುಪಾಲು ಸಣ್ಣ ಮತ್ತು ಅತಿ ಸಣ್ಣ ರೈತರನ್ನು ಹೊಂದಿರುವ ಭಾರತೀಯ ಕೃಷಿರಂಗ ಈಗತಾನೆ ಜೀವನಾಧಾರದ ಕೃಷಿಯಿಂದ ವಾಣಿಜ್ಯ ಕೃಷಿಗೆ ಪ್ರವೇಶಿಸುತ್ತಿದೆ ಹಾಗೂ ಜಾಗತಿಕ ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ ಮತ್ತು ಘಟಕ ಬೆಲೆಯಲ್ಲಿ ಸ್ಪರ್ಧಾತ್ಮಕವಾಗಿರುವಂತಹ ಕೃಷಿ ಉತ್ಪನ್ನಗಳನ್ನು ಭಾರತೀಯ ರೈತರಿಂದ ನಿರೀಕ್ಷಿಸಲಾಗುತ್ತಿದೆ. ಸೂಕ್ತ ಸಂರಕ್ಷಣೆಯ ಅಂಶಗಳಿಲ್ಲದೆ ಕೈಗಾರಿಕಾ ರಾಷ್ಟ್ರಗಳ ಸ್ಥಾಪಿತ ವಾಣಿಜ್ಯ ಕೃಷಿ ಎದುರು ಭಾರತ ಸ್ಪರ್ಧಿಸಲು ಸಾಧ್ಯವೆ? ಈ ಜಾಗತಿಕ ಮಟ್ಟದ ಸ್ಪರ್ಧೆಯಲ್ಲಿ ಆತನಿಗೆ `ಸಮಾನ ಅಂಕಣ' ದೊರಕುವುದೆ?....
ಪುಟಗಳು: 32 ಬೆಲೆ ರೂ. 13
ಕನ್ನಡ ಅಧ್ಯಯನ ವಿಭಾಗ, ಕೃಷಿ ವಿ.ವಿ., ಬೆಂಗಳೂರು
ಈ ಪುಸ್ತಕಗಳನ್ನು ಪಡೆಯಲು ಲೇಖಕರನ್ನು ಸಂಪರ್ಕಿಸಿ: balukolar@yahoo.com
ಸಹ ಸಂಕಲನಕಾರನಾಗಿ/ ಸಹ ಅನುವಾದಕನಾಗಿ ರಚಿಸಿರುವ ಇತರ ಕೃತಿಗಳು
2 comments:

speakingsofsoil said...

It is very good, simply i saw yr books blog.

Channesh

Avinash said...

How to publish a book sir???